ಇನ್ನೂ ನಿಗೂಢವಾಗಿಯೇ ಉಳಿದ ಬಿಹಾರ ಮುಖ್ಯಮಂತ್ರಿ ಹುದ್ದೆ; ನಿತೀಶ್ ಕುಮಾರ್ರನ್ನು ಭೇಟಿಯಾದ ಚಿರಾಗ್ ಪಾಸ್ವಾನ್

Photo credit: PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಪ್ರಚಂಡ ಜಯಭೇರಿ ಬಾರಿಸಿದ್ಧರೂ, ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಿನ್ನೂ ನಿಗೂಢವಾಗಿಯೇ ಉಳಿದಿದೆ. ಈ ನಡುವೆ ಲೋಕ್ ಜನ್ ಪಕ್ಷ(ರಾಮ್ ವಿಲಾಸ್ ಪಾಸ್ವಾನ್)ದ ನಾಯಕ ಚಿರಾಗ್ ಪಾಸ್ವಾನ್ ಅವರು ಜೆಡಿಯು ವರಿಷ್ಠ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶನಿವಾರ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಚಿರಾಗ್ ಪಾಸ್ವಾನ್ ನೇತೃತ್ವದ ಜನ್ ಲೋಕ್ ಪಕ್ಷ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ, ಅವರು ಬಿಹಾರದ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವದಂತಿಗಳು ರಾಜಕೀಯ ಪಡಸಾಲೆಯಲ್ಲಿ ಗರಿಗೆದರಿರುವುದರಿಂದ, ನಿತೀಶ್ ಕುಮಾರ್ ಹಾಗೂ ಅವರ ನಡುವಿನ ಭೇಟಿ ಮಹತ್ವ ಪಡೆದುಕೊಂಡಿದೆ.
ಚಿರಾಗ್ ಪಾಸ್ವಾನ್ ತಮ್ಮ ಹಾಗೂ ನಿತೀಶ್ ಕುಮಾರ್ ನಡುವಿನ ಭೇಟಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, "ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರನ್ನು ಅಭಿನಂದಿಸಿ, ಶುಭ ಹಾರೈಸಿದೆ. ಎನ್ಡಿಎ ಮೈತ್ರಿಕೂಟದಲ್ಲಿನ ಎಲ್ಲ ಮಿತ್ರ ಪಕ್ಷಗಳ ಪಾತ್ರವನ್ನು ಮುಖ್ಯಮಂತ್ರಿ ಪ್ರಶಂಸಿಸಿದರು ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳ ಪೈಕಿ 202 ಸ್ಥಾನಗಳಲ್ಲಿ ಎನ್ಡಿಎ ಭರ್ಜರಿ ಗೆಲುವು ಸಾಧಿಸಿದ ನಂತರ, ಈ ಭೇಟಿ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಜನ್ ಲೋಕ್ ಪಕ್ಷ, ಈ ಬಾರಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ಅಮೋಘ ಗೆಲುವು ಸಾಧಿಸಿದೆ.







