ಭಾರತದಾದ್ಯಂತ ಕ್ರೈಸ್ತರ ಮೇಲಿನ ಹಿಂಸಾಚಾರದ ಘಟನೆಗಳಲ್ಲಿ ತೀವ್ರ ಏರಿಕೆ: ಯುಸಿಎಫ್
ಕೇವಲ 3 ತಿಂಗಳಲ್ಲಿ 245 ಹಿಂಸಾಚಾರ ಘಟನೆಗಳು

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ, ಭಾರತದಾದ್ಯಂತ ಕ್ರೈಸ್ತರ ಮೇಲಿನ ಹಿಂಸಾಚಾರದ ಘಟನೆಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ ಎಂದು ಯುನೈಟೆಡ್ ಕ್ರಿಶ್ಚಿಯನ್ ಫೋರಮ್(ಯುಸಿಎಫ್) ವರದಿ ಮಾಡಿದೆ. ಯುಸಿಎಫ್ನ ಸಹಾಯವಾಣಿ ಸೇವೆಯ ಮೂಲಕ ಸಂಗ್ರಹಿಸಲಾದ ದತ್ತಾಂಶಗಳ ಪ್ರಕಾರ ಈ ವರ್ಷದ ಜನವರಿ ಮತ್ತು ಎಪ್ರಿಲ್ ನಡುವೆ ಕ್ರೈಸ್ತರ ವಿರುದ್ಧದ ಹಿಂಸಾಚಾರದ 245 ಪ್ರಕರಣಗಳು ದಾಖಲಾಗಿವೆ.
ಕ್ರೈಸ್ತರು ಸರಾಸರಿ ದಿನಕ್ಕೆ ಎರಡು ಹಿಂಸಾಚಾರದ ಘಟನೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿರುವ ವರದಿಯು,2014ರಿಂದ ಇಂತಹ ಘಟನೆಗಳಲ್ಲಿ ತೀವ್ರ ಏರಿಕೆಯಾಗಿದ್ದು,ಇದು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ಆತಂಕಕಾರಿ ಪ್ರವೃತ್ತಿಯನ್ನು ಬಿಂಬಿಸುತ್ತಿದೆ ಎಂದು ಹೇಳಿದೆ.
ಯುಸಿಎಫ್ ಬಹಿರಂಗಗೊಳಿಸಿರುವ ದತ್ತಾಂಶಗಳು ಪರಿಸ್ಥಿತಿಯ ಕರಾಳ ಚಿತ್ರಣವನ್ನು ನೀಡುತ್ತಿವೆ. ಕ್ರೈಸ್ತ ಬುಡಕಟ್ಟು ಗುಂಪುಗಳು ಮತ್ತು ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚಿನ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ. ಹಿಂಸಾಚಾರದ ಪ್ರಮಾಣ ಸ್ಥಿರವಾಗಿ ಏರಿಕೆಯಾಗುತ್ತಿದ್ದು,2022ರಲ್ಲಿ 601,2023ರಲ್ಲಿ 734 ಮತ್ತು 2024ರಲ್ಲಿ 834 ಘಟನೆಗಳು ವರದಿಯಾಗಿವೆ ಎಂದು ವರದಿಯು ತಿಳಿಸಿದೆ.
2025,ಜನವರಿಯಿಂದ ಎಪ್ರಿಲ್ವರೆಗೆ ಭಾರತದ 19 ರಾಜ್ಯಗಳಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರದ ಘಟನೆಗಳು ವರದಿಯಾಗಿವೆ. 50 ಘಟನೆಗಳೊಂದಿಗೆ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದ್ದರೆ ಛತ್ತೀಸ್ಗಡ(46) ನಂತರದ ಸ್ಥಾನದಲ್ಲಿದೆ. ಆಂಧ್ರಪ್ರದೇಶ(14), ಬಿಹಾರ(16),ದಿಲ್ಲಿ(1),ಗುಜರಾತ್(8),ಹರ್ಯಾಣ(12), ಹಿಮಾಚಲ ಪ್ರದೇಶ(3), ಜಾರ್ಖಂಡ್(17), ಕರ್ನಾಟಕ(22), ಮಧ್ಯಪ್ರದೇಶ(14),ಮಹಾರಾಷ್ಟ್ರ(6),ಒಡಿಶಾ(2),ಪಂಜಾಬ್(6),ರಾಜಸ್ಥಾನ(18),ತಮಿಳುನಾಡು(1),ತೆಲಂಗಾಣ(1),ಉತ್ತರಾಖಂಡ(2) ಮತ್ತು ಪ.ಬಂಗಾಳ(11)ಗಳಲ್ಲಿಯೂ ಹಿಂಸಾಚಾರದ ಘಟನೆಗಳು ನಡೆದಿವೆ.
ಹಿಂಸಾಚಾರಗಳಲ್ಲಿ ದೈಹಿಕ ಹಲ್ಲೆಗಳು,ಕೊಲೆಗಳು,ಲೈಂಗಿಕ ಹಿಂಸೆ,ಬೆದರಿಕೆಗಳು,ಸಾಮಾಜಿಕ ಬಹಿಷ್ಕಾರಗಳು ಮತ್ತು ಧಾರ್ಮಿಕ ಆಸ್ತಿಗಳ ಮೇಲಿನ ದಾಳಿಗಳು ಸೇರಿವೆ. ಹಲವಾರು ಸಂದರ್ಭಗಳಲ್ಲಿ ಕ್ರೈಸ್ತರ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಲಾಗಿದೆ ಅಥವಾ ಪ್ರಾರ್ಥನಾ ಸಭೆಗಳಿಗೆ ಅಡ್ಡಿಯನ್ನುಂಟು ಮಾಡಲಾಗಿದ್ದು,ಇದು ಹೆಚ್ಚುತ್ತಿರುವ ಅಸಹಿಷ್ಣುತೆಯ ವಾತಾವರಣವನ್ನು ಎತ್ತಿ ತೋರಿಸುತ್ತಿದೆ ಎಂದು ವರದಿಯು ತಿಳಿಸಿದೆ







