ನಾಳೆ ನಾಗರಿಕ ರಕ್ಷಣಾ ಅಣಕು ಕವಾಯತು
ಕೇಂದ್ರ ಗೃಹ ಇಲಾಖೆಯಿಂದ ಪರಾಮರ್ಶನಾ ಸಭೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಜೊತೆ ಉದ್ವಿಗ್ನತೆ ಉಲ್ಬಣಿಸಿರುವ ನಡುವೆ ಕೇಂದ್ರ ಸರಕಾರವು ದೇಶಾದ್ಯಂತ ನಾಗರಿಕ ರಕ್ಷಣಾ ವ್ಯವಸ್ಥೆಯನ್ನು ಸನ್ನದ್ಧಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ದೇಶಾದ್ಯಂತ ನಡೆಯಲಿರುವ ಅಣಕು ಕವಾಯತಿಗೆ ಪೂರ್ವಭಾವಿಯಾಗಿ ಕೇಂದ್ರ ಗೃಹ ಸಚಿವ ಗೋವಿಂದ ಮೋಹನ್ ಮಂಗಳವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ನಡೆಸಿದರು.
ನಾಗರಿಕ ರಕ್ಷಣಾ ಮಹಾನಿರ್ದೇಶಕರು ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್) ಸೇರಿದಂತೆ ಪ್ರಮುಖ ಕೇಂದ್ರೀಯ ಪಡೆಗಳು ಹಾಗೂ ಏಜೆನ್ಸಿಗಳ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.
‘‘ಸಭೆಯಲ್ಲಿ ನಾಗರಿಕ ರಕ್ಷಣಾ ಸನ್ನದ್ಧತೆಯ ಪರಾಮರ್ಶೆ ನಡೆಸಲಾಯಿತು ಸಾರ್ವಜನಿಕ ರಕ್ಷಣಾ ಕಾರ್ಯವಿಧಾನದಲ್ಲಿ ಇರುವ ‘ನ್ಯೂನತೆ’ಗಳನ್ನು ಗುರುತಿಸಲಾಯಿತು ’’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ)ದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಮೇ 7ರಂದು ಬುಧವಾರ ದೇಶಾದ್ಯಂತ ನಿಗದಿತ ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ಸೋಮವಾರ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ ನಿರ್ದೇಶನವೊಂದನ್ನು ಜಾರಿಗೊಳಿಸಿದೆ. ದೇಶಾದ್ಯಂತ 244 ತಾಣಗಳಲ್ಲಿ ಈ ಅಣಕು ಕವಾಯತುಗಳು ನಡೆಯಲಿದೆ. ಅವುಗಳಲ್ಲಿ ಹೆಚ್ಚಿನವು ಯುದ್ಧ ಸಂದರ್ಭದಲ್ಲಿ ಶತ್ರುದಾಳಿಯ ಬೆದರಿಕೆಯಿರುವ ತಾಣಗಳೆಂದು ಗುರುತಿಸಲಾಗಿದೆ.ಈ 244 ಸ್ಥಳಗಳ ಪೈಕಿ 19 ಸ್ಥಳಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ.
ಒಂದು ವೇಳೆ ಶತ್ರು ದಾಳಿ ಅಥವಾ ತುರ್ತು ಸನ್ನಿವೇಶವನ್ನು ಎದುರಿಸಲು ನಾಗರಿಕ ರಕ್ಷಣಾ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ಅಣಕು ಕವಾಯತನ್ನು ನಡೆಸಲಾಗುತ್ತಿದೆ. ಸೈರನ್ಗಳ ಮೊಳಗುವಿಕೆ ಸೇರಿದಂತೆ ವಾಯುದಾಳಿಯ ಮುನ್ನೆಚ್ಚರಿಕೆ ವ್ಯವಸ್ಥೆಯ ಕಾರ್ಯನಿರ್ವಹಣೆಯ ಪರೀಕ್ಷೆ, ಸ್ಥಳೀಯ ತುರ್ತು ಸೇವೆಗಳಿಂದ ಸಮನ್ವಯದ ಪ್ರತಿಕ್ರಿಯೆ ಹಾಗೂ ಸಾರ್ವಜನಿಕ ಸುರಕ್ಷತಾ ಕವಾಯತುಗಳನ್ನು ನಡೆಸಲಾಗುತ್ತದೆ.
1971ರ ಭಾರತ-ಪಾಕ್ ಯುದ್ಧದ ಆನಂತರ ಸಾರ್ವಜನಿಕ ರಕ್ಷಣಾ ಅಣಕು ಕವಾಯತು ನಡೆಯುತ್ತಿರುವುದು ಇದೇ ಮೊದಲ ಸಲವಾಗಿದೆ.







