ನಿವೃತ್ತಿಯ ಬಳಿಕ ನ್ಯಾಯಾಧೀಶರು ಸರಕಾರಿ ಉದ್ಯೋಗ ಸ್ವೀಕರಿಸುವುದು ನೈತಿಕವಾಗಿ ಕಳವಳಕಾರಿ: ಸಿಜೆಐ ಗವಾಯಿ

ಸಿಜೆಐ ಗವಾಯಿ | PTI
ಹೊಸದಿಲ್ಲಿ: ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹಾಗೂ ದುರ್ನಡತೆಯ ನಿದರ್ಶನಗಳು ಸಾರ್ವಜನಿಕರು ಅದರಲ್ಲಿ ಇಟ್ಟಿರುವ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದಾಗಿ ಸಮಗ್ರ ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆಯ ಬಗ್ಗೆ ನಂಬಿಕೆಯನ್ನು ನಶಿಸುವ ಸಂಭವವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ನ ಸುಪ್ರೀಂಕೋರ್ಟ್ನಲ್ಲಿ ಬುಧವಾರ ಆಯೋಜಿಸಲಾದ‘ನ್ಯಾಯಾಂಗದ ನೈತಿಕತೆ ಹಾಗೂ ಸಾರ್ವಜನಿಕ ಆತ್ಮವಿಶ್ವಾಸ’ ಕುರಿತ ದುಂಡುಮೇಜಿನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನ್ಯಾಯಾಧೀಶರು ನಿವೃತ್ತಿಯ ಬಳಿಕ ಸರಕಾರದ ಉದ್ಯೋಗಗಳನ್ನು ಸ್ವೀಕರಿಸುತ್ತಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವೇಳೆ ನ್ಯಾಯಾಧೀಶರೊಬ್ಬರು ನಿವೃತ್ತಿಯಾದ ಕೂಡಲೇ ಸರಕಾರದ ಇನ್ನೊಂದು ಉದ್ಯೋಗವನ್ನು ಪಡೆದುಕೊಂಡಲ್ಲಿ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಪೀಠಕ್ಕೆ ರಾಜೀನಾಮೆ ನೀಡಿದಲ್ಲಿ, ಇದು ಗಣನೀಯವಾದ ನೈತಿ ಕಳವಳಗಳನ್ನು ಮೂಡಿಸುತ್ತದೆ ಹಾಗೂ ಸಾರ್ವಜನಿಕರ ಪರಿಶೀಲನೆಗೆ ಕಾರಣವಾಗುತ್ತದೆ ಎಂದರು
ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ದುರ್ನಡತೆಯ ನಿದರ್ಶನಗಳು ಬೆಳಕಿಗೆ ಬಂದಾಗಲೆಲ್ಲಾ ಸುಪ್ರೀಂಕೋರ್ಟ್ ತಕ್ಷಣವೇ ಕಾರ್ಯಪ್ರವೃತ್ತವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು.
ನ್ಯಾಯಾಧೀಶರೊಬ್ಬರು ನಿವೃತ್ತಿಯ ಬಳಿಕ ಚುನಾವಣೆಗೆ ಸ್ಪರ್ಧಿಸುವುದು ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ನಿಷ್ಪಕ್ಷಪಾತದ ಬಗ್ಗೆ ಸಂದೇಹಗಳನ್ನು ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ತಾನು ಹಾಗೂ ಹಲವಾರು ಮಂದಿ ಸಹದ್ಯೋಗಿಗಳು ನಿವೃತ್ತಿಯ ಬಳಿಕ ಸರಕಾರದಲ್ಲಿ ಯಾವುದೇ ಪಾತ್ರವನ್ನು ವಹಿಸದಿರಲು ಅಥವಾ ಹುದ್ದೆಗಳನ್ನು ಸ್ವೀಕರಿಸದೇ ಇರಲು ನಿರ್ಧರಿಸಿರುವುದಾಗಿ ಗವಾಯಿ ಹೇಳಿದ್ದಾರೆ.
ಉನ್ನತ ಮಟ್ಟದ ನ್ಯಾಯಾಂಗದಲ್ಲಿ ಕೊಲೇಜಿಯಂ ವ್ಯವಸ್ಥೆಯ ಮೂಲಕ ನ್ಯಾಯಾಧೀಶರುಗಳನ್ನು ನೇಮಿಸುವುದನ್ನು ಅವರು ಸಮರ್ಥಿಸಿಕೊಂಡರು.
ನ್ಯಾಯಾಂಗದಲ್ಲಿ ಸಾರ್ವಜನಿಕ ಪಾರದರ್ಶಕತೆಯನ್ನು ವೃದ್ಧಿಸಲು ಬಾರತದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ಪ್ರಕಣಗಳ ನೇರ ಪ್ರಸಾರವನ್ನು ನಡೆಸುತ್ತಿದೆ ಎಂದರು.







