ಎಸ್ಸಿ ಮೀಸಲಾತಿಯಿಂದ ಕೆನೆಪದರವನ್ನು ಹೊರಗಿಡುವುದಕ್ಕೆ ಸಿಜೆಐ ಗವಾಯಿ ಬೆಂಬಲ

ಸಿಜೆಐ ಗವಾಯಿ | Photo Credit : PTI
ಅಮರಾವತಿ (ಆಂಧ್ರಪ್ರದೇಶ),ನ.16: ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಮೀಸಲಾತಿಯಿಂದ ಕೆನೆ ಪದರವನ್ನು ಹೊರಗಿರಿಸುವುದನ್ನು ತಾನು ಈಗಲೂ ಬೆಂಬಲಿಸುತ್ತೇನೆ ಎಂದು ರವಿವಾರ ಇಲ್ಲಿ ಹೇಳಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಬಿ.ಆರ್.ಗವಾಯಿ ಅವರು,ಮೀಸಲಾತಿ ವಿಷಯದಲ್ಲಿ ಐಎಎಸ್ ಅಧಿಕಾರಿಯ ಮಕ್ಕಳನ್ನು ಬಡ ಕೃಷಿಕಾರ್ಮಿಕರ ಮಕ್ಕಳೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾ.ಗವಾಯಿ,‘ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಕಂಡುಕೊಂಡಂತೆ ಕೆನೆ ಪದರದ ಪರಿಕಲ್ಪನೆಯನ್ನು ನಾನು ಇನ್ನಷ್ಟು ವಿಶ್ಲೇಷಿಸಿ ನನ್ನದೇ ಆದ ಅಭಿಪ್ರಾಯವನ್ನು ಹೊಂದಿದ್ದೇನೆ. ನನ್ನ ತೀರ್ಪನ್ನು ವ್ಯಾಪಕವಾಗಿ ಟೀಕಿಸಲಾಗಿತ್ತಾದರೂ,ಇತರ ಹಿಂದುಳಿದ ವರ್ಗಗಳಿಗೆ ಅನ್ವಯವಾಗುವುದು ಪರಿಶಿಷ್ಟ ಜಾತಿಗಳಿಗೂ ಅನ್ವಯವಾಗಬೇಕು’ ಎಂದು ಹೇಳಿದರು.
ಒಂದೆರಡು ದಿನಗಳಲ್ಲಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ನ್ಯಾ.ಗವಾಯಿ ಸಿಜೆಐ ಆದ ಬಳಿಕ ಭಾಗವಹಿಸಿದ್ದ ಮೊದಲ ಕಾರ್ಯಕ್ರಮ ಅವರ ಹುಟ್ಟೂರು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿತ್ತು,ಈಗ ಅವರ ಕೊನೆಯ ಕಾರ್ಯಕ್ರಮವು ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ನ್ಯಾ.ಸೂರ್ಯಕಾಂತ ಅವರು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ.
2024ರಲ್ಲಿ ಪ್ರಕರಣವೊಂದರಲ್ಲಿ ತನ್ನ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠದ ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿ ನ್ಯಾ.ಗವಾಯಿ ಅವರು ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಲ್ಲಿಯೂ ಕೆನೆ ಪದರವನ್ನು ಗುರುತಿಸಲು ರಾಜ್ಯಗಳು ನೀತಿಯೊಂದನ್ನು ರೂಪಿಸಬೇಕು ಮತ್ತು ಅವರಿಗೆ ಮೀಸಲಾತಿಯ ಲಾಭಗಳನ್ನು ನಿರಾಕರಿಸಬೇಕು. ನಿಜವಾದ ಸಮಾನತೆಯನ್ನು ಸಾಧಿಸಲು ಇದೊಂದೇ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ್ದರು.
ಮಹತ್ವದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣ ನ್ಯಾಯಸಮ್ಮತವಾಗಿದೆ ಎಂದು ಬಹುಮತದಿಂದ ಎತ್ತಿ ಹಿಡಿದಿತ್ತು. ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಮೀಸಲಾತಿಯನ್ನು ಕಲ್ಪಿಸಲು ಈ ವರ್ಗೀಕರಣವನ್ನು ಮಾಡುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ ಎಂದು ಅದು ಸ್ಪಷ್ಟಪಡಿಸಿತ್ತು.







