ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ : ಬಹಿರಂಗ ಪತ್ರದಲ್ಲಿ ತಿಳಿಸಿದ ಸಿಜೆಐ ಗವಾಯಿ ತಾಯಿ

Photo | livemint
ಹೊಸ ದಿಲ್ಲಿ: ಅಕ್ಟೋಬರ್ 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವಕ್ಕೆ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ತಾಯಿ ಕಮಲ ಗವಾಯಿ ಅವರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ನೀಡಿದ್ದ ಆಹ್ವಾನದ ಬೆನ್ನಿಗೇ ವಿವಾದ ಸೃಷ್ಟಿಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಕಮಲ ಗವಾಯಿ, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಮಲ್ ಗವಾಯಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ ಎಂಬ ಸಂಗತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಕಮಲ ಗವಾಯಿ ಹಾಗೂ ಅವರ ಪತಿ ಹಾಗೂ ಬಿಹಾರದ ಮಾಜಿ ರಾಜ್ಯಪಾಲ ದಾದಾಸಾಹೇಬ್ ಗವಾಯಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದು ವಿವಾದದ ಸ್ವರೂಪವನ್ನೂ ಪಡೆದುಕೊಂಡಿತ್ತು. ಹೀಗಾಗಿ, ಕಮಲ್ ಗವಾಯಿ ಬಹಿರಂಗ ಪತ್ರದ ಮೂಲಕ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
“ಒಂದು ವೇಳೆ ನಾನೇನಾದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೇದಿಕೆಯಲ್ಲಿದ್ದಿದ್ದರೆ, ನಾನು ಅಂಬೇಡ್ಕರ್ ಸಿದ್ಧಾಂತವನ್ನು ಮುಂದಿಡುತ್ತಿದ್ದೆ” ಎಂದು ಕಮಲ ಗವಾಯಿ ಹೇಳಿದ್ದಾರೆ.
“ಕೆಲವರು ನನ್ನನ್ನು ಅಕ್ಟೋಬರ್ 5ರಂದು ಆಯೋಜನೆಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಕೆಲವು ಜನರು ನನ್ನ ಹಾಗೂ ನನ್ನ ಪತಿ ದಾದಾಸಾಹೇಬ್ ಗವಾಯಿ ವಿರುದ್ಧ ಆರೋಪಗಳನ್ನು ಮಾಡಿದರು. ಆದರೆ, ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತದಂತೆ ಬದುಕುತ್ತಾ ಬಂದಿದ್ದೇವೆ. ದಾದಾಸಾಹೇಬ್ ಗವಾಯಿ ತಮ್ಮ ಇಡೀ ಜೀವನವನ್ನು ಅಂಬೇಡ್ಕರ್ ವಾದದ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ವಿಭಿನ್ನ ಸಿದ್ಧಾಂತದ ವೇದಿಕೆಯ ಮೇಲೆ ನಮ್ಮ ಸಿದ್ಧಾಂತವನ್ನು ಹಂಚಿಕೊಳ್ಳುವುದು ಮುಖ್ಯವಾಗಿದ್ದರೂ, ಅದಕ್ಕೆ ಧೈರ್ಯದ ಅಗತ್ಯವಿದೆ” ಎಂದು ಕಮಲ ಗವಾಯಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ನನ್ನ ಪತಿಯು ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಹಾಗೂ ತಮ್ಮ ವಿರೋಧಿ ಸಿದ್ಧಾಂತದ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ದಮನಿತ ವರ್ಗಗಳ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ.
“ನನ್ನ ಪತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ, ಅವರು ಹಿಂದುತ್ವವನ್ನು ಒಪ್ಪಿಕೊಂಡಿರಲಿಲ್ಲ. ನಾನೇನಾದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೇದಿಕೆಯನ್ನು ಹಂಚಿಕೊಂಡಿದ್ದರೆ, ನಾನು ಅಂಬೇಡ್ಕರ್ ವಾದವನ್ನು ಮುಂದಿಡುತ್ತಿದ್ದೆ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
“ಆದರೆ, ಕೇವಲ ಒಂದು ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನನ್ನ ಮೇಲೆ ಆರೋಪಗಳು ಹಾಗೂ ಕಳಂಕ ಹಚ್ಚುವ ಪ್ರಯತ್ನಗಳು ನಡೆದಿದ್ದರಿಂದ ನನಗೆ ತುಂಬಾ ಬೇಸರವಾಗಿದೆ. ಹೀಗಾಗಿ ನಾನು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ” ಎಂದು ಕಮಲ ಗವಾಯಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.







