ರೋಹಿಂಗ್ಯಾ ಪ್ರಕರಣದಲ್ಲಿ ಸಿಜೆಐ ವಿರುದ್ಧದ ‘ಪ್ರೇರೇಪಿತ ಅಭಿಯಾನʼಕ್ಕೆ ನಿವೃತ್ತ ನ್ಯಾಯಾಧೀಶರಿಂದ ಖಂಡನೆ

ಸೂರ್ಯಕಾಂತ | Photo Credit : PTI
ಹೊಸದಿಲ್ಲಿ,ಡಿ.10: ರೋಹಿಂಗ್ಯಾ ವಲಸಿಗರಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆ ಐ) ಸೂರ್ಯಕಾಂತ ಅವರ ಹೇಳಿಕೆಗಳಿಗಾಗಿ ಅವರನ್ನು ಗುರಿಯಾಗಿಸಿಕೊಂಡು ‘ಪ್ರೇರೇಪಿತ ಅಭಿಯಾನʼವನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ 44 ನಿವೃತ್ತ ನ್ಯಾಯಾಧೀಶರು ಹೇಳಿಕೆಯೊಂದರಲ್ಲಿ ಖಂಡಿಸಿದ್ದಾರೆ.
ಕಸ್ಟಡಿಯಲ್ಲಿದ್ದ ರೋಹಿಂಗ್ಯಾ ನಿರಾಶ್ರಿತರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆಯನ್ನು ಡಿ.2ರಂದು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ರೋಹಿಂಗ್ಯಾ ನಿರಾಶ್ರಿತರ ಕುರಿತು ನೀಡಿದ ‘ಕೆಲವು ಅವಿವೇಕದ ಹೇಳಿಕೆಗಳ ಬಗ್ಗೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿ’ ಕೆಲವು ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಿಲಿಟಿ ಆ್ಯಂಡ್ ರಿಫಾರ್ಮ್ಸ್ (ಸಿಜೆಎಆರ್) ಡಿ.5ರಂದು ಹೊರಡಿಸಿದ್ದ ಬಹಿರಂಗ ಪತ್ರವನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಅವಹೇಳನ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿರುವ ಹೇಳಿಕೆಯು, ನ್ಯಾಯಾಂಗ ಪ್ರಕ್ರಿಯೆಗಳು ನ್ಯಾಯಯುತ ಮತ್ತು ತಾರ್ಕಿಕ ಟೀಕೆಗಳಿಗೆ ಮಾತ್ರ ಒಳಪಟ್ಟಿರಬೇಕು ಎಂದು ತಿಳಿಸಿದೆ.
‘ಆದರೆ ನಾವು ನೋಡುತ್ತಿರುವುದು ತಾತ್ವಿಕ ಭಿನ್ನಾಭಿಪ್ರಾಯವಲ್ಲ, ಬದಲಾಗಿ ನ್ಯಾಯಾಂಗದ ನಿಯಮಿತ ಕಲಾಪವನ್ನು ಪೂರ್ವಾಗ್ರಹ ಪೀಡಿತ ಕೃತ್ಯವೆಂದು ತಪ್ಪಾಗಿ ನಿರೂಪಿಸುವ ಮೂಲಕ ದುರ್ಬಲಗೊಳಿಸುವ ಪ್ರಯತ್ನವಾಗಿದೆ’ ಎಂದು ಹೇಳಿಕೆಯು ತಿಳಿಸಿದೆ.
ನ್ಯಾಯಾಲಯದ ಮುಂದೆ ಹೇಳಿಕೊಳ್ಳಲಾಗುತ್ತಿರುವ ಸ್ಥಾನಮಾನವನ್ನು ಕಾನೂನಿನಲ್ಲಿ ಯಾರು ನೀಡಿದ್ದಾರೆ ಎಂಬ ಅತ್ಯಂತ ಮೂಲಭೂತ ಕಾನೂನು ಪ್ರಶ್ನೆಯನ್ನೆತ್ತಿದ್ದಕ್ಕಾಗಿ ಸಿಜೆಐ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದ ಹೊರತು ಹಕ್ಕುಗಳ ಕುರಿತು ನ್ಯಾಯನಿರ್ಣಯ ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಾಧೀಶರು ತಮ್ಮ ಹೇಳಿಕೆಯಲ್ಲಿ ಬೆಟ್ಟು ಮಾಡಿದ್ದಾರೆ.
ಭಾರತದಲ್ಲಿರುವ ಯಾವುದೇ ವ್ಯಕ್ತಿಯನ್ನು, ಭಾರತೀಯ ಅಥವಾ ವಿದೇಶಿ ಪ್ರಜೆಯಾಗಿರಲಿ, ಚಿತ್ರಹಿಂಸೆ, ಕಣ್ಮರೆ ಅಥವಾ ಅಮಾನವೀಯ ನಡವಳಿಕೆಗೆ ಗುರಿಯಾಗಿಸುವಂತಿಲ್ಲ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸಬೇಕು ಎಂಬ ಪೀಠದ ಹೇಳಿಕೆಯನ್ನು ಸಿಜೆ ವಿರುದ್ಧದ ಅಭಿಯಾನವು ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿಕೆಯು ತಿಳಿಸಿದೆ.
ಇದನ್ನು ಬಚ್ಚಿಟ್ಟು ನ್ಯಾಯಾಲಯವು ಅಮಾನವೀಯತೆಯನ್ನು ತೋರಿಸಿದೆ ಎಂದು ಆರೋಪಿಸುವುದು ನಿಜವಾಗಿ ಹೇಳಿದ್ದರ ಗಂಭೀರ ತಿರುಚುವಿಕೆಯಾಗಿದೆ ಎಂದು ತಿಳಿಸಿರುವ ಹೇಳಿಕೆಯು ರಾಷ್ಟ್ರೀಯತೆ, ವಲಸೆ, ದಾಖಲೀಕರಣ ಅಥವಾ ಗಡಿ ಭದ್ರತೆ ಕುರಿತು ನ್ಯಾಯಾಂಗದ ಪ್ರತಿಯೊಂದೂ ಪ್ರಶ್ನೆಯನ್ನು ದ್ವೇಷ ಅಥವಾ ಪೂರ್ವಾಗ್ರಹ ಎಂದು ಆರೋಪಿಸಿದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯವುಂಟಾಗುತ್ತದೆ ಎಂದು ಹೇಳಿದೆ.
‘ಆದ್ದರಿಂದ ನಾವು ಸರ್ವೋಚ್ಚ ನ್ಯಾಯಾಲಯ ಮತ್ತು ಸಿಜೆಐ ಮೇಲೆ ನಮ್ಮ ಸಂಪೂರ್ಣ ವಿಶ್ವಾಸವನ್ನು ದೃಢಪಡಿಸುತ್ತೇವೆ, ನ್ಯಾಯಾಲಯದ ಹೇಳಿಕೆಗಳನ್ನು ತಿರುಚುವ ಮತ್ತು ಭಿನ್ನಾಭಿಪ್ರಾಯಗಳನ್ನು ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಗಳನ್ನಾಗಿಸುವ ಪ್ರೇರೇಪಿತ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ. ಕಾನೂನನ್ನು ಉಲ್ಲಂಘಿಸಿ ಭಾರತವನ್ನು ಪ್ರವೇಶಿಸಿರುವ ವಿದೇಶಿ ಪ್ರಜೆಗಳು ಭಾರತೀಯ ಗುರುತು ಮತ್ತು ದಾಖಲೆಗಳನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿರುವುದನ್ನು ಪರಿಶೀಲಿಸಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದ ರಚನೆಯನ್ನು ನಾವು ಬೆಂಬಲಿಸುತ್ತೇವೆ ’ಎಂದು ನಿವೃತ್ತ ನ್ಯಾಯಾಧೀಶರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







