ನಿವೃತ್ತಿಯ ನಂತರ ಯಾವುದೇ ಅಧಿಕೃತ ಹುದ್ದೆಯನ್ನು ಅಲಂಕರಿಸುವುದಿಲ್ಲ: ಸಿಜೆಐ ಸಂಜೀವ್ ಖನ್ನಾ

ಸಿಜೆಐ ಸಂಜೀವ್ ಖನ್ನಾ | PC : X
ಹೊಸ ದಿಲ್ಲಿ: ನಾನು ನಿವೃತ್ತಿಯ ನಂತರ ಯಾವುದೇ ಅಧಿಕೃತ ಹುದ್ದೆಯನ್ನು ಸ್ವೀಕರಿಸದಿದ್ದರೂ, ಕಾನೂನಿಗೆ ಸಂಬಂಧಿಸಿದಂತೆ ನನ್ನ ವೃತ್ತಿಯನ್ನು ಮುಂದುವರಿಸಲಿದ್ದೇನೆ ಎಂದು ಮಂಗಳವಾರ ನಿರ್ಗಮಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಹೇಳಿದರು.
ಜನವರಿ 18, 2019ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದಿದ್ದ ನ್ಯಾ. ಸಂಜೀವ್ ಖನ್ನಾ , ನವೆಂಬರ್ 11, 2024ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಅವರು ಇಂದು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ.
ಇಂದಿನ ಕೋರ್ಟ್ ಕಲಾಪ ಮುಕ್ತಾಯಗೊಂಡ ನಂತರ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ ನ ಆವರಣದಲ್ಲಿ ಪತ್ರಕರ್ತರನ್ನು ಭೇಟಿ ಮಾಡಿದರು. ಈ ವೇಳೆ, ನಾನು ನಿವೃತ್ತಿ ನಂತರ ಯಾವುದೇ ಅಧಿಕೃತ ಹುದ್ದೆಯನ್ನು ವಹಿಸಿಕೊಳ್ಳುವುದಿಲ್ಲ. ಬದಲಿಗೆ, ಕಾನೂನು ಕ್ಷೇತ್ರದಲ್ಲೇ ಏನಾದರೂ ಮಾಡುತ್ತೇನೆ” ಎಂದು ತಿಳಿಸಿದರು.
ಹಲವಾರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಮ್ಮ ನಿವೃತ್ತಿಯ ನಂತರ, ಮಧ್ಯಸ್ಥಿಕೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ನನ್ನದು ಮೂರನೆಯ ಇನಿಂಗ್ಸ್ ಕೂಡಾ ಇದ್ದು, ನಾನು ಕಾನೂನಿಗೆ ಸಂಬಂಧಿಸಿದಂತೆ ಏನಾದರೂ ಮಾಡಲಿದ್ದೇನೆ” ಎಂದು ಹೇಳಿದರು.
ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶ್ವಂತ್ ವರ್ಮರ ನಿವಾಸದಲ್ಲಿ ದೊರೆತಿದ್ದ ನಗದು ಪ್ರಕರಣಕ್ಕೆ ಸಂಬಂಧಿಸಿದ ವಿವಾದದ ಕುರಿತು ಪತ್ರಕರ್ತರು ಪ್ರಶ್ನಿ್ಸಿದಾಗ, ನ್ಯಾಯಾಂಗದ ಚಿಂತನೆ ನಿರ್ಣಾಯಕ ಹಾಗೂ ನ್ಯಾಯಸಮ್ಮತವಾಗಿರಬೇಕು ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮೇ 10ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನಿಯೋಜಿತರಾಗಿದ್ದ ನ್ಯಾ. ಬಿ.ಆರ್.ಗವಾಯಿ ಕೂಡಾ ತಮ್ಮ ನಿವೃತ್ತಿಯ ನಂತರ ಯಾವುದೇ ಅಧಿಕೃತ ಹುದ್ದೆಗಳನ್ನು ಅಲಂಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.







