ಮಥುರಾ: ಅಂಬೇಡ್ಕರ್ ಕುರಿತ ಡಿಜೆ ಆಕ್ಷೇಪಿಸಿ ಸವರ್ಣೀಯರಿಂದ ಕಲ್ಲು ತೂರಾಟ
ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾದ ದಲಿತರ ಮದುವೆ ಮೆರವಣಿಗೆ

ಸಾಂದರ್ಭಿಕ ಚಿತ್ರ
ಆಗ್ರಾ: ಮಥುರಾದಲ್ಲಿ ಶನಿವಾರ ಸಂಜೆ ಇಬ್ಬರು ದಲಿತ ವರರ ವಿವಾಹ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾತ್ಮಕ ಘರ್ಷಣೆ ಸಂಭವಿಸಿದ್ದು, ಕಲ್ಲು ತೂರಾಟ ಮತ್ತು ದೈಹಿಕ ಹಲ್ಲೆ ಸೇರಿದಂತೆ ದಲಿತರ ಮೇಲೆ ಠಾಕೂರ್ ಸಮುದಾಯದ ಜನರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬಿ.ಆರ್. ಅಂಬೇಡ್ಕರ್ ಅವರಿಗೆ ಸಮರ್ಪಿತವಾದ ಹಾಡುಗಳು ಮತ್ತು ಜಾಟವ್ ಸಮುದಾಯವನ್ನು "ವೈಭವೀಕರಿಸುವ" ಡಿಜೆ ಸಂಗೀತದ ವಿಷಯಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮುನಾಪರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಹ್ರುವಾ ಗ್ರಾಮದಲ್ಲಿ ಸಂಜೆ 6:30 ರಿಂದ 7:30 ರ ನಡುವೆ ಈ ಘಟನೆ ನಡೆದಿದೆ.
ವರರಾದ ರಾಮ್ ಕುಮಾರ್ (22) ಮತ್ತು ಸೌರಭ್ ಕುಮಾರ್ (23) ಅವರ ಸೋದರಸಂಬಂಧಿ ದೇವೇಂದ್ರ ಕುಮಾರ್ ಸಲ್ಲಿಸಿದ ಎಫ್ಐಆರ್ ಪ್ರಕಾರ, "ಮದುವೆ ಮೆರವಣಿಗೆಯ ವೇಳೆ, ಜಾಟವ್ ಸಮುದಾಯವನ್ನು ಹೊಗಳುವ ಹಾಡುಗಳನ್ನು ಡಿಜೆ ನುಡಿಸುತ್ತಿದ್ದರು. ಈ ಹಾಡುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಠಾಕೂರ್ ಸಮುದಾಯದ ಕೆಲವು ಸದಸ್ಯರು ಕಲ್ಲು ತೂರಾಟ ಮತ್ತು ಜಾತಿ ನಿಂದನೆಗಳನ್ನು ಪ್ರಾರಂಭಿಸಿದರು." ಎಂದು ದೂರಲಾಗಿದೆ.
ವಾಗ್ವಾದವು ತ್ವರಿತವಾಗಿ ದೈಹಿಕ ಹಲ್ಲೆಗೆ ನಾಂದಿಯಾಗಿದ್ದು, ಇದರಲ್ಲಿ ಇಬ್ಬರು ವರರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್ಎಸ್ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 352 (ದಾಳಿ ಅಥವಾ ಕ್ರಿಮಿನಲ್ ಬಲ), 351(3) (ಕ್ರಿಮಿನಲ್ ಬೆದರಿಕೆ), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ" ಎಂದು ಜಮುನಾಪರ್ ಎಸ್ಎಚ್ಒ ಅಜಯ್ ಕಿಶೋರ್ ಹೇಳಿದ್ದಾರೆ.
"ನಾನು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇನೆ. ಮದುವೆ ಮೆರವಣಿಗೆಯಲ್ಲಿ ಡಿಜೆ ಹಾಡುಗಳಿಂದಾಗಿ ಸಮಸ್ಯೆ ಉಂಟಾಗಿದೆ. ಇಬ್ಬರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ, ತನಿಖೆ ಮುಂದುವರೆದಿದೆ" ಎಂದು ಮಥುರಾದ ಸದರ್ ಪ್ರದೇಶದ ಡಿಎಸ್ಪಿ ಸಂದೀಪ್ ಸಿಂಗ್ ಹೇಳಿದರು.







