ಮಹಾರಾಷ್ಟ್ರ | ನಾಳೆಯಿಂದ ಲಘುವಾಹನಗಳಿಗೆ ಟೋಲ್ ಮುಕ್ತವಾಗಿ ಮುಂಬೈ ಪ್ರವೇಶ : ಮುಖ್ಯಮಂತ್ರಿ ಏಕನಾಥ್ ಶಿಂದೆ ಘೋಷಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ | PTI
ಮುಂಬೈ: ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಮುಂಬೈನ ಎಲ್ಲ ಐದು ಟೋಲ್ ಗೇಟ್ ಗಳಲ್ಲಿ ಸಂಪೂರ್ಣ ಸುಂಕ ವಿನಾಯಿತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಘೋಷಿಸಿದ್ದಾರೆ. ಈ ನಿಯಮವು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಈ ನಿರ್ಧಾರವನ್ನು ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ನೂತನ ಘೋಷಣೆಯಿಂದ ಲಘು ವಾಹನ ಸವಾರರು ಮುಂಬೈನ ಎಲ್ಲ ಐದು ಟೋಲ್ ಗೇಟ್ ಗಳಲ್ಲಿ ಯಾವುದೇ ಸುಂಕ ಪಾವತಿಸದೆ ಮುಂಬೈ ಪ್ರವೇಶಿಸಬಹುದಾಗಿದೆ. ಕ್ರಮವಾಗಿ ದಹಿಸರ್, ಮುಲುಂದ್, ವಶಿ, ಐರೋಲಿ ಹಾಗೂ ತಿನ್ಹಂತ ನಾಕ ಟೋಲ್ ಗೇಟ್ ಗಳಲ್ಲಿ ಸುಂಕ ವಿನಾಯಿತಿ ಜಾರಿಯಾಗಲಿದೆ. ಮೇಲಿನ ಟೋಲ್ ಗೇಟ್ ಗಳಲ್ಲಿ ಲಘು ವಾಹನಗಳ ಪ್ರವೇಶಕ್ಕೆ 45 ರೂ. ಶುಲ್ಕವಿದೆ.
ಈ ಪ್ರಮುಖ ಸುಂಕ ಕೇಂದ್ರಗಳಲ್ಲಿ ಲಘು ವಾಹನ ಸವಾರರು ಸುಂಕ ಪಾವತಿಸಬೇಕಾದ ಅಗತ್ಯತೆ ಇರದಿರುವುದರಿಂದ, ಮುಂಬೈ ಪ್ರವೇಶಿಸುವ ಲಘು ವಾಹನ ಸವಾರರಿಗೆ ಇದರಿಂದ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ಈ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೆ, ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರ ಚುನಾವಣೆಗೂ ಮುನ್ನ ಇದೊಂದು ಹತಾಶ ಪ್ರಯತ್ನವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ರಾಜ್ಯದಲ್ಲಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.







