ಮೂರು ರಾಜ್ಯಗಳಲ್ಲಿ ಸಿಎಂ ಆಯ್ಕೆ ವಿಳಂಬ: ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಜೈರಾಮ್ ರಮೇಶ್(PTI)
ಹೊಸದಿಲ್ಲಿ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಮೂರು ರಾಜ್ಯಗಳಲ್ಲಿ ಸಿಎಂ ಆಯ್ಕೆಯನ್ನು ಪ್ರಕಟಿಸಲು ಯಾಕೆ ವಿಳಂಬವಾಗಿದೆ ಎಂದು ಗುರುವಾರ ಪ್ರಶ್ನಿಸಿರುವ ಕಾಂಗ್ರೆಸ್, ವಿಳಂಬಕ್ಕೆ ನೈಜ ಕಾರಣವೇನು ಎಂದು ಬಿಜೆಪಿ ಯಾಕೆ ತಿಳಿಸುತ್ತಿಲ್ಲ ಎಂದೂ ಪ್ರಶ್ನಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾದ 24 ಗಂಟೆಗಳಿಗೂ ಮುನ್ನವೇ ತೆಲಂಗಾಣ ಮುಖ್ಯಮಂತ್ರಿಯ ನೇಮಕದಲ್ಲಿ ಏಕೆ ವಿಳಂಬವಾಗಿದೆ ಎಂದು ಎಲ್ಲ ಮಾಧ್ಯಮಗಳೂ ಟೀಕಿಸಿದ್ದವು. ಆಯಿತು. ಒಂದು ದಿನದ ಹಿಂದೆ ನಮ್ಮ ಮುಖ್ಯಮಂತ್ರಿಯನ್ನು ಪ್ರಕಟಿಸಲಾಗಿದೆ ಹಾಗೂ ಇಂದು ಮಧ್ಯಾಹ್ನ 1 ಗಂಟೆಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ” ಎಂದು ತೆಲಂಗಾಣ ರಾಜ್ಯ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ರೇವಂತ್ ರೆಡ್ಡಿ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.
“ಆದರೆ, ಚುನಾವಣಾ ಫಲಿತಾಂಶ ಪ್ರಕಟವಾಗಿ ಮೂರು ದಿನಗಳೇ ಕಳೆದು ಹೋಗಿದೆ. ಹೀಗಿದ್ದೂ ಬಿಜೆಪಿಯೇಕೆ ಛತ್ತೀಸ್ ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಿಗೆ ತನ್ನ ಮುಖ್ಯಮಂತ್ರಿಗಳನ್ನು ಪ್ರಕಟಿಸಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
“ವಿಳಂಬಕ್ಕೆ ನೈಜ ಕಾರಣವೇನು ಎಂದು ಬಿಜೆಪಿಯೇಕೆ ತಿಳಿಸುತ್ತಿಲ್ಲ?” ಎಂದೂ ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ರಾಜಸ್ಥಾನ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆ ಮೂಲಕ ಹಿಂದಿ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯುಂಟಾಗಿತ್ತು. ಈ ಫಲಿತಾಂಶವು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರಿ ಬಲ ತುಂಬಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.







