ಬಿಹಾರ: ಚುನಾವಣೆ ಹೊಸ್ತಿಲಲ್ಲೇ ಮಾಸಿಕ ಪಿಂಚಣಿ 1,100 ರೂ.ಗೆ ಏರಿಸಿದ ಸಿಎಂ ನಿತೀಶ್ ಕುಮಾರ್

ನಿತೀಶ್ ಕುಮಾರ್ | PTI
ಪಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಂಪರ್ ಘೋಷಣೆ ಮಾಡಿದ್ದು, ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ವಿಧವೆಯರ ಪಿಂಚಣಿ ಮೊತ್ತವನ್ನು 400 ರೂ.ನಿಂದ 1,100 ರೂ.ಗೆ ಹೆಚ್ಚಳ ಮಾಡಿದ್ದಾರೆ. ಈ ನಿರ್ಧಾರ ಜುಲೈ ತಿಂಗಳಿಂದ ಜಾರಿಗೆ ಬರಲಿದ್ದು, ರಾಜ್ಯ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯ 1,09,69,255 ಫಲಾನುಭವಿಗಳಿಗೆ ಈ ಹೆಚ್ಚಳದಿಂದ ಲಾಭವಾಗಲಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಿತೀಶ್ ಕುಮಾರ್, “ಇನ್ನು ಮುಂದೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯ ಎಲ್ಲ ಹಿರಿಯ ನಾಗರಿಕರು, ವಿಲಚೇತನರು ಹಾಗೂ ವಿಧವೆಯರು ಇನ್ನು ಮುಂದೆ ಪ್ರತಿ ತಿಂಗಳು 400 ರೂ. ಬದಲು 1,100 ರೂ. ಪಿಂಚಣಿ ಪಡೆಯಲಿದ್ದಾರೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಎಲ್ಲ ಫಲಾನುಭವಿಗಳೂ ಜುಲೈ ತಿಂಗಳಿನಿಂದ ಈ ಹೆಚ್ಚಳವಾದ ಪಿಂಚಣಿಯನ್ನು ಪಡೆಯಲಿದ್ದಾರೆ. ಈ ಪಿಂಚಣಿ ಮೊತ್ತವು ಪ್ರತಿ ತಿಂಗಳ 10ನೇ ತಾರೀಕಿನಂದು ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುವುದನ್ನು ಖಾತರಿಗೊಳಿಸಲಾಗುವುದು. ಇದರಿಂದ 1,09,69,255 ಮಂದಿ ಫಲಾನುಭವಿಗಳಿಗೆ ತುಂಬಾ ಅನುಕೂಲವಾಗಲಿದೆ” ಎಂದು ಪ್ರಕಟಿಸಿದ್ದಾರೆ.
“ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಭಾಗವಾಗಿದ್ದು, ಅವರ ಘನತೆಯ ಜೀವನವನ್ನು ಖಾತರಿಗೊಳಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ರಾಜ್ಯ ಸರಕಾರ ಈ ದಿಕ್ಕಿನಲ್ಲಿ ಪ್ರಯತ್ನ ಮಾಡುವುದನ್ನು ಮುಂದುವರಿಸಲಿದೆ” ಎಂದೂ ಅವರು ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬೆನ್ನಿಗೇ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಈ ಪ್ರಕಟಣೆ ಹೊರ ಬಿದ್ದಿದೆ.





