ಅವಧಿ ಮೀರಿದ ವಾಹನಗಳಿಗೆ ದೇಶಾದ್ಯಂತ ಸಮಾನ ಕಾನೂನು ಅನ್ವಯಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ: ಸಿಎಂ ರೇಖಾ ಗುಪ್ತಾ

Photo Credit: ANI
ಹೊಸದಿಲ್ಲಿ: ತೀರಾ ಹಳೆಯದಾದ ವಾಹನಗಳಿಗೆ ದೇಶಾದ್ಯಂತ ಅನುಸರಿಸಲಾಗುವ ನಿಯಮಗಳನ್ನೇ ರಾಷ್ಟ್ರರಾಜಧಾನಿ ಹೊಸದಿಲ್ಲಿಗೂ ಅನ್ವಯಿಸಬೇಕೆಂದು ತನ್ನ ಸರಕಾರವು ಸುಪ್ರೀಂಕೋರ್ಟ್ ಗೆ ಮನವಿ ಮಾಡಲಿದೆಯೆಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಿಳಿಸಿದ್ದಾರೆ.
ಅವಧಿ ಮೀರಿದ ವಾಹನಗಳಿಗೆ ಇಂಧನ ಪೂರೈಕೆ ಮಾಡುವುದನ್ನು ನಿಷೇಧಿಸುವ ಕಾನೂನನ್ನು ತಕ್ಷಣವೇ ಅಮಾನತಿನಲ್ಲಿರಿಸುವಂತೆ ದಿಲ್ಲಿ ಸರಕಾರವು ಕಳೆದ ವಾರ ಕೇಂದ್ರ ಸರಕಾರದ ವಾಯು ಗುಣಮಟ್ಟ ಸಮಿತಿಯನ್ನು ಆಗ್ರಹಿಸಿತ್ತು. ರಾಜಧಾನಿಯ ರಸ್ತೆಗಳಲ್ಲಿ ತೀರಾ ಹಳೆಯದಾದ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ವಿಷಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ತಾನು ಪ್ರಯತ್ನಿಸುವುದಾಗಿ ದಿಲ್ಲಿ ಸರಕಾರವು ಕೇಂದ್ರ ಸರಕಾರದ ವಾಯು ಗುಣಮಟ್ಟ ಸಮಿತಿಗೆ ಭರವಸೆಯನ್ನು ನೀಡಿತ್ತು.
ಅವಧಿ ಮೀರಿದ ವಾಹನಗಳಿಗೆ ಇಂಧನ ಪೂರೈಕೆಯನ್ನು ನಿಷೇಧಿಸುವುದು ಕಾರ್ಯಸಾಧ್ಯವಲ್ಲ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಪರಿಸರ ಸಚಿವ ಮನ್ಜಿಂದರ್ ಸಿಂಗ್ ಸಿರ್ಸಾ ಅವರು ವಾಯುಗುಣಮಟ್ಟ ನಿರ್ವಹಣಾ (ಸಿಎಕ್ಯೂಎಂ) ಅಧ್ಯಕ್ಷ ರಾಜೇಶ್ ವರ್ಮಾ ಅವರಿಗೆ ತಿಳಿಸಿದ್ದರು.
2018ರ ಸುಪ್ರೀಂಕೋರ್ಟ್ ಆದೇಶವು ರಾಜಧಾನಿ ಹೊಸದಿಲ್ಲಿಯಲ್ಲಿ 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ವಾಹನಗಳು ಹಾಗೂ 15 ವರ್ಷಗಳಿಗಿಂತ ಹಳೆಯಾದ ಪೆಟ್ರೋಲ್ ವಾಹನಗಳನ್ನು ನಿಷೇಧಿಸಿತ್ತು. 2014ರ ರಾಷ್ಟ್ರೀಯ ಹಸಿರು ನ್ಯಾಯಾಧೀರಣದ ಆದೇಶ ಕೂಡಾ ಸಾರ್ವಜನಿಕ ಸ್ಥಳಗಳಲ್ಲಿ 15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಿತ್ತು.