ಬಿಹಾರದ ಹೇಳಿಕೆಯನ್ನು ತಮಿಳುನಾಡಿನಲ್ಲಿ ಪುನರಾವರ್ತಿಸಿ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಸವಾಲು

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (File Photo: PTI)
ಧರ್ಮಪುರಿ: ಪ್ರಧಾನಿ ನರೇಂದ್ರ ಮೋದಿ ಬಿಹಾರದ ಚುನಾವಣೆಯಲ್ಲಿ ಮತ ರಾಜಕಾರಣದ ಹೇಳಿಕೆಗಳಲ್ಲಿ ನಿರತರಾಗಿದ್ದು, ಅವರಿಗೆ ಧೈರ್ಯವಿದ್ದರೆ ಅದೇ ಧಾಟಿಯಲ್ಲಿ ತಮಿಳುನಾಡಿನಲ್ಲೂ ಮಾತನಾಡಲಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸವಾಲು ಹಾಕಿದ್ದಾರೆ.
ಹೊರಗಿನವರಿಗೆ ನೆಲೆಸಲು ತಮಿಳುನಾಡು ಯೋಗ್ಯ ಸ್ಥಳವಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಸ್ಟಾಲಿನ್, “ಇದೇ ರೀತಿ ತಮಿಳುನಾಡಿನಲ್ಲಿ ಮಾತನಾಡಲು ಅವರಿಗೆ ಧೈರ್ಯವಿದೆಯೆ?” ಎಂದು ಪ್ರಶ್ನಿಸಿದ್ದಾರೆ. “ಯಾರು ಏನು ಬೇಕಾದರೂ ಪಿತೂರಿ ಮಾಡಲಿ, ಯಾರು ಯಾವ ಬಗೆಯ ಕೀಳು ಮಟ್ಟದ ಹೇಳಿಕೆಯನ್ನಾದರೂ ನೀಡಲಿ, ಎಷ್ಟು ಬೇಕಾದರೂ ಸುಳ್ಳು ಸುದ್ದಿಗಳನ್ನು ಹರಡಲಿ, ಆದರೆ, 2026ರ ಚುನಾವಣೆಯಲ್ಲಿ ಡಿಎಂಕೆ ಸರಕಾರ ರಚಿಸಲಿರುವುದು ಮಾತ್ರ ನಿಶ್ಚಿತ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಅವರು ಘೋಷಿಸಿದ್ದಾರೆ. ರಾಜ್ಯವನ್ನು ಎಐಎಡಿಎಂಕೆ ಹಿಡಿತದಿಂದ ಮುಕ್ತಗೊಳಿಸುತ್ತೇನೆ ಎಂದೂ ಅವರು ಶಪಥ ಮಾಡಿದ್ದಾರೆ.
ನವೆಂಬರ್ 2ರಂದು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯನ್ನು ಬಹಿಷ್ಕರಿಸಿದ್ದ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಸ್ಟಾಲಿನ್, “ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತಮಿಳುನಾಡು ಜನತೆಯ ಮತದಾನದ ಹಕ್ಕನ್ನು ಕಸಿದುಕೊಂಡು, ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನವನ್ನು ವಿರೋಧಿಸಬೇಕಿರುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ” ಎಂದೂ ಅವರು ಕರೆ ನೀಡಿದ್ದಾರೆ.







