ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ಕಾಲೇಜಿನ ಭದ್ರತಾ ಸಿಬ್ಬಂದಿಯ ಬಂಧನ
ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ

Photo credit: PTI
ಕೋಲ್ಕತ್ತಾ: ಈ ವಾರದ ಆರಂಭದಲ್ಲಿ ಕೋಲ್ಕತ್ತಾ ಕಾನೂನು ಕಾಲೇಜಿನ ಓರ್ವ ಮಾಜಿ ವಿದ್ಯಾರ್ಥಿ ಸೇರಿದಂತೆ ಮೂವರು ಆರೋಪಿಗಳಿಂದ ಅತ್ಯಾಚಾರಕ್ಕೀಡಾಗಿದ್ದ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಓರ್ವ ಕಾಲೇಜು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಲೇಜು ಆವರಣದಲ್ಲಿರುವ ಭದ್ರತಾ ಸಿಬ್ಬಂದಿಯ ಕೊಠಡಿಯಲ್ಲಿ ನಡೆದಿದ್ದ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ಈ ಬಂಧನದೊಂದಿಗೆ ಈವರೆಗೆ ಬಂಧನಕ್ಕೀಡಾದ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಈ ಸಂಬಂಧ ವಿಚಾರಣೆಗೆಂದು ವಶಕ್ಕೆ ಪಡೆಯಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ನಂತರ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಭದ್ರತಾ ಸಿಬ್ಬಂದಿಯ ಉತ್ತರಗಳು ಅಸಂಬದ್ಧವಾಗಿದ್ದುದರಿಂದ, ಇಂದು ಬೆಳಗ್ಗೆ ಆತನನ್ನು ಬಂಧಿಸಲಾಗಿದೆ. ಆತ ಕಾಲೇಜಿನ ಬಳಿ ಉಪಸ್ಥಿತನಿದ್ದದ್ದು ಕಾಲೇಜಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಘಟನೆ ನಡೆದ ವೇಳೆ ಭದ್ರತಾ ಸಿಬ್ಬಂದಿಯು ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲನಾಗಿದ್ದು, ಈ ವೇಳೆ ಬೇರೆ ಯಾರಾದರೂ ಕರ್ತವ್ಯದಲ್ಲಿದ್ದರೆ ಅಥವಾ ಇಲ್ಲವೆ ಎಂಬುದನ್ನೂ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ಜೂನ್ 25ರಂದು ಸಂಜೆ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದಿತ್ತು.







