ಹೊಸ ವರ್ಷಕ್ಕೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದುಬಾರಿ: 111ರೂ. ಹೆಚ್ಚಳ

ಹೊಸದಿಲ್ಲಿ,ಜ.1:ಹೊಸ ವರ್ಷದ ಮೊದಲ ದಿನವೇ ದೇಶದ ಪ್ರಮುಖ ಮಹಾನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 111ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸೇವಾ ವಲಯದ ನಿರ್ವಹಣಾ ವೆಚ್ಚಗಳು ಹೆಚ್ಚುವ ಸಾಧ್ಯತೆ ಇದೆ.
ನೂತನ ದರ ಪರಿಷ್ಕರಣೆಯಂತೆ ದಿಲ್ಲಿಯಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ದರ 1,691.50 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1,531.50 ರೂ.ಗಳಿಂದ 1,642.50 ರೂ.ಗಳಿಗೆ ಹೆಚ್ಚಾಗಿದೆ. ಕೋಲ್ಕತ್ತಾದಲ್ಲಿ 1,684 ರೂ.ಗಳಿಂದ 1,795 ರೂ.ಗಳಿಗೆ ಏರಿಕೆಯಾದರೆ, ಚೆನ್ನೈನಲ್ಲಿ 1,739.50 ರೂ.ಗಳಿಂದ 1,849.50 ರೂ.ಗಳಿಗೆ ತಲುಪಿದೆ.
ದೈನಂದಿನ ಕಾರ್ಯಾಚರಣೆಗಳಿಗೆ ಅಡುಗೆ ಅನಿಲದ ಮೇಲೆ ಅವಲಂಬಿತವಾಗಿರುವ ಸೇವಾ ವಲಯಕ್ಕೆ ಈ ದರ ಏರಿಕೆ ಹೆಚ್ಚುವರಿ ಹೊರೆ ತಂದಿದೆ ಎಂದು ವಲಯದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಮನೆ ಬಳಕೆ ಅಡುಗೆ ಅನಿಲ ತುಟ್ಟಿಯಾಗಿಲ್ಲ.
ಇದೇ ವೇಳೆ, ಜನವರಿ 1ರಿಂದ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ದರವನ್ನು ಕಡಿತಗೊಳಿಸಲಾಗಿದೆ. ಪ್ರತಿ ಕೆಜಿಗೆ 864.35 ರೂ. ಇದ್ದ ದರವನ್ನು 791.48 ರೂ.ಗಳಿಗೆ ಇಳಿಸಲಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿದ ವೆಚ್ಚದಿಂದ ಸಂಕಷ್ಟದಲ್ಲಿದ್ದ ವಿಮಾನಯಾನ ಸಂಸ್ಥೆಗಳಿಗೆ ಸ್ವಲ್ಪ ಪರಿಹಾರ ಒದಗಿದೆ. ಎಟಿಎಫ್ ವೆಚ್ಚವು ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದ ಸುಮಾರು ಶೇ.40ರಷ್ಟಿರುವುದರಿಂದ, ಈ ಕಡಿತವು ವೆಚ್ಚ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ನವೆಂಬರ್‌ನಲ್ಲಿ ನಡೆದ ಹಿಂದಿನ ಮಾಸಿಕ ಪರಿಷ್ಕರಣೆಯಲ್ಲಿ, ತೈಲ ಮಾರುಕಟ್ಟೆ ಕಂಪೆನಿಗಳು ಕೆಲ ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು 6.50 ರೂ.ವರೆಗೆ ಕಡಿತಗೊಳಿಸಿದ್ದವು. ಅದೇ ವೇಳೆ ಎಟಿಎಫ್ ದರವನ್ನು ಸುಮಾರು ಶೇ.1ರಷ್ಟು ಹೆಚ್ಚಿಸಲಾಗಿತ್ತು.







