ಮೋದಿ ಪ್ರಧಾನಿಯಾಗಿರುವಷ್ಟು ಸಮಯ ನೆಹರೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿನಲ್ಲಿದ್ದರು: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಪ್ರಿಯಾಂಕಾ ಗಾಂಧಿ | Photo Credit : indiatoday.in
ಹೊಸದಿಲ್ಲಿ: “ಮೋದಿ ಪ್ರಧಾನಿಯಾಗಿರುವಷ್ಟು ಸಮಯ ನೆಹರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿನಲ್ಲಿದ್ದರು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಲೋಕಸಭೆಯಲ್ಲಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ವಂದೇ ಮಾತರಂ’ 150 ವರ್ಷಗಳಾಚರಣೆಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಗಾಂಧಿ, ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರನ್ನು ಪದೇಪದೇ ಟೀಕಿಸುವ ಪ್ರಧಾನಿ ಹಾಗೂ ಬಿಜೆಪಿ ಪದಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸದನವನ್ನುದ್ದೇಶಿಸಿ ಮಾತನಾಡಿದ ಅವರು, “ನೆಹರು 12 ವರ್ಷಗಳ ಕಾಲ ಬ್ರಿಟಿಷರ ಜೈಲಿನಲ್ಲಿ ಇದ್ದರು. ನಂತರ 17 ವರ್ಷ ದೇಶವನ್ನು ಮುನ್ನಡೆಸಿದರು. ಅವರು ISRO ಆರಂಭಿಸದಿದ್ದರೆ ಮಂಗಳಯಾನ ಸಾಧ್ಯವಾಗುತ್ತಿರಲಿಲ್ಲ; DRDO ಸ್ಥಾಪಿಸದಿದ್ದರೆ ತೇಜಸ್ ಇರುತ್ತಿರಲಿಲ್ಲ; IIT, IIMಗಳನ್ನು ಸ್ಥಾಪಿಸದಿದ್ದರೆ ನಾವು ಐಟಿ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. AIIMS ಇಲ್ಲದೆ ಕೊರೊನಾ ಸಮಯವನ್ನು ಹೇಗೆ ಎದುರಿಸುತ್ತಿದ್ದೆವು?” ಎಂದು ಪ್ರಶ್ನೆಗಳ ಸುರಿಮಳೆಗೈದರು. “ಪಂಡಿತ್ ನೆಹರು ದೇಶಕ್ಕಾಗಿ ಬದುಕಿದರು; ದೇಶ ಸೇವೆಯಲ್ಲೇ ಕೊನೆಯುಸಿರೆಳೆದರು” ಎಂದು ಪ್ರಿಯಾಂಕಾ ಗಾಂಧಿ ಉಲ್ಲೇಖಿಸಿದರು.
ಪ್ರಧಾನಿ ಮೋದಿ ಆಡಳಿತವನ್ನು ಗುರಿಯಾಗಿಸಿಕೊಂಡ ಅವರು, “ಪ್ರಧಾನಿಯವರ ಆತ್ಮವಿಶ್ವಾಸ ಕುಸಿಯುತ್ತಿದೆ. ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ಜನರು ಇಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ; ಆದರೆ ಸರ್ಕಾರ ಅವುಗಳನ್ನು ಪರಿಹರಿಸುತ್ತಿಲ್ಲ”, ಎಂದು ಆರೋಪಿಸಿದರು.
“ಬಿಜೆಪಿಯವರು ಇರುವುದು ಚುನಾವಣೆಗಾಗಿ. ಆದರೆ ನಾವು ದೇಶಕ್ಕಾಗಿ. ಎಷ್ಟು ಚುನಾವಣೆಯಲ್ಲಿ ಸೋತರೂ, ನಿಮ್ಮ ಸಿದ್ಧಾಂತದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ದೇಶದ ಹಿತಕ್ಕಾಗಿ ಹೋರಾಡುವುದನ್ನು ನೀವು ತಡೆಯಲು ಸಾಧ್ಯವಿಲ್ಲ” ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.
ವಂದೇಮಾತರಂ ಗೀತೆಯ ಮೂಲವು ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಸುಭಾಷ್ ಚಂದ್ರ ಬೋಸ್ ಅವರಿಗೆ ಜವಾಹರಲಾಲ್ ನೆಹರೂ ಪತ್ರ ಬರೆದಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯ ಆರೋಪವನ್ನು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಲ್ಲಗಳೆದರು.
ಲೋಕಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿಯವರು ಪತ್ರದ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
1937ರಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬರೆದಿದ್ದ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, "ವಂದೇಮಾತರಂ ಗೀತೆಯ ಉಳಿದ ಸಾಲುಗಳ ವಿರುದ್ಧದ ಆಕ್ಷೇಪವನ್ನು ಕೋಮುವಾದಿಗಳು ಉತ್ಪಾದಿಸಿದ್ದಾರೆ" ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಚಾಟಿ ಬೀಸಿದರು.
ಇದಕ್ಕೂ ಮುನ್ನ, ಇಂದು ಬೆಳಗ್ಗೆ ಸುಭಾಷ್ ಚಂದ್ರ ಬೋಸ್ ಅವರಿಗೆ ಜವಾಹರಲಾಲ್ ನೆಹರೂ ಬರೆದಿದ್ದ ಪತ್ರವನ್ನು ಉಲ್ಲೇಖಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವಂದೇಮಾತರಂ ಬಗೆಗಿನ ಜಿನ್ನಾರ ಭಾವನೆಗಳನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅಂಗೀಕರಿಸಿದ್ದರು. ವಂದೇಮಾತರಂ ಗೀತೆಯ ಹಿನ್ನೆಲೆಯು ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದಿದ್ದ ಪತ್ರದಲ್ಲಿ ಜವಾಹರಲಾಲ್ ಲಾಲ್ ನೆಹರೂ ಆತಂಕ ವ್ಯಕ್ತಪಡಿಸಿದ್ದರು ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.







