ಕುತೂಹಲ ಮೂಡಿಸಿದ ಚೀನಾ ಕಮ್ಯುನಿಸ್ಟ್ ಪಕ್ಷ - RSS ನಾಯಕರ ಭೇಟಿ!

ದತ್ತಾತ್ರೇಯ ಹೊಸಬಾಳೆ |Photo Credit ; PTI
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಯನಿರ್ವಹಣೆಯ ಸ್ವರೂಪವನ್ನು ತಿಳಿಯಲು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗವು ಮಂಗಳವಾರ ದಿಲ್ಲಿಯ ಕೇಶವ್ ಕುಂಜ್ ನಲ್ಲಿರುವ RSS ಪ್ರಧಾನ ಕಚೇರಿಗೆ ಭೇಟಿ ನೀಡಿತು. ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕತ್ವದೊಂದಿಗೆ ಸಿಪಿಸಿ ನಿಯೋಗ ನಡೆಸಿದ ಸಭೆಯ ಮರುದಿನ ಈ ಭೇಟಿ ನಡೆದಿದೆ.
RSS ಮೂಲಗಳ ಪ್ರಕಾರ, ಸಿಪಿಸಿ ನಿಯೋಗವು RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿತು. ಈ ಸಂವಾದವನ್ನು ‘ಸೌಜನ್ಯ ಭೇಟಿ’ ಎಂದು RSS ಹಿರಿಯ ಪದಾಧಿಕಾರಿಗಳು ವಿವರಿಸಿದ್ದು, ನಿಯೋಗದ ವಿನಂತಿಯ ಮೇರೆಗೆ ಸಭೆ ಆಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ. RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಯಾಣದಲ್ಲಿದ್ದ ಕಾರಣ ಸಭೆಗೆ ಹಾಜರಾಗಿರಲಿಲ್ಲ.
“ಇದು ಸೌಜನ್ಯದ ಭೇಟಿ ಮಾತ್ರ. ಸಭೆಗೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿ ಇರಲಿಲ್ಲ,” ಎಂದು RSS ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ RSS ಶತಮಾನೋತ್ಸವ ಆಚರಣೆಯ ಭಾಗವಾಗಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಉಪನ್ಯಾಸ ಸರಣಿಗೆ ಹಲವು ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಚೀನಾದ ರಾಜತಾಂತ್ರಿಕರಿಗೆ RSS ಆಹ್ವಾನ ನೀಡಿರಲಿಲ್ಲ. ಇದೇ ವೇಳೆ ಪಾಕಿಸ್ತಾನ ಹಾಗೂ ತುರ್ಕಿಯೇ ನಿಯೋಗಗಳಿಗೂ ಆಹ್ವಾನ ನೀಡಲಾಗಿರಲಿಲ್ಲ.
ಚೀನಾದ ಆಡಳಿತ ಪಕ್ಷವಾದ ಸಿಪಿಸಿ ನಿಯೋಗವು ಆರು ವರ್ಷಗಳ ಬಳಿಕ ಬಿಜೆಪಿ ನಾಯಕತ್ವದೊಂದಿಗೆ ಅಧಿಕೃತ ಸಭೆ ನಡೆಸಿರುವುದು ಗಮನ ಸೆಳೆದಿದೆ. ಸಿಪಿಸಿಯ ಅಂತರರಾಷ್ಟ್ರೀಯ ಸಂಪರ್ಕ ವಿಭಾಗವು ಅಂತರ-ಪಕ್ಷ ಸಂವಹನಗಳನ್ನು ಸಂಯೋಜಿಸುವ ಪ್ರಮುಖ ಘಟಕವಾಗಿದ್ದು, ಬಿಜೆಪಿಯು 2000ರ ದಶಕದ ಆರಂಭದಿಂದಲೂ ಇಂತಹ ಪರಸ್ಪರ ಸಭೆಗಳಲ್ಲಿ ಭಾಗವಹಿಸುತ್ತಿದೆ.
ಜನವರಿ 2011ರಲ್ಲಿ ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿದ್ದಾಗ ಪಕ್ಷದ ನಿಯೋಗವೊಂದು ಚೀನಾಕ್ಕೆ ಭೇಟಿ ನೀಡಿತ್ತು. ನಂತರ 2019ರಲ್ಲಿ ಅರುಣ್ ಸಿಂಗ್ ನೇತೃತ್ವದ ಮತ್ತೊಂದು ಬಿಜೆಪಿ ನಿಯೋಗವೂ ಚೀನಾಕ್ಕೆ ತೆರಳಿತ್ತು.
ಸೋಮವಾರ ನಡೆದ ಸಭೆಯ ಕುರಿತು ಮಾತನಾಡಿದ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ್ ಚೌತೈವಾಲೆ, “ಮಾನ್ಯ ಶ್ರೀಮತಿ ಸನ್ ಹೈಯಾನ್ ಅವರ ನೇತೃತ್ವದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ ಇಂದು ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿತು. ಬಿಜೆಪಿ ಮಹಾ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ನಿಯೋಗವು ಬಿಜೆಪಿ–ಸಿಪಿಸಿ ನಡುವಿನ ಅಂತರ-ಪಕ್ಷ ಸಂವಹನವನ್ನು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿತು. ಭಾರತಕ್ಕೆ ಚೀನಾದ ರಾಯಭಾರಿ ಕ್ಸು ಫೀಹಾಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು,” ಎಂದು ತಿಳಿಸಿದ್ದಾರೆ.
RSS ಮತ್ತು ಚೀನಾ ಪ್ರತಿನಿಧಿಗಳ ನಡುವಿನ ಸಂವಾದಗಳು ಅಪರೂಪವಾಗಿದ್ದು, 2009ರಲ್ಲಿ ಬಿಜೆಪಿ ಮತ್ತು RSS ನಾಯಕರ ನಿಯೋಗ ಬೀಜಿಂಗ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ರೀತಿಯ ಸಭೆ ನಡೆದಿತ್ತು. 2014ರಲ್ಲಿ RSS ನಾಯಕ ಪ್ರದೀಪ್ ಜೋಶಿ, ಚೀನಾದ ಶ್ರೇಷ್ಠತೆಯನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಇತಿಹಾಸ ಮತ್ತು ನೈತಿಕತೆಯ ಪಠ್ಯಪುಸ್ತಕಗಳನ್ನು ತಿದ್ದುಪಡಿ ಮಾಡುವ ಸಿಪಿಸಿಯ ನಿಲುವನ್ನು ಸ್ವಾಗತಿಸಿದ್ದರು.
2020ರಲ್ಲಿ ನಡೆದ ಗಾಲ್ವಾನ್ ಸಂಘರ್ಷದ ನಂತರ ಬಿಜೆಪಿ ಮತ್ತು ಸಿಪಿಸಿ ನಡುವೆ ಇದು ಮೊದಲ ಅಧಿಕೃತ ಸಭೆಯಾಗಿದೆ. ವಾಸ್ತವ ನಿಯಂತ್ರಣ ರೇಖೆ (LAC) ಪ್ರದೇಶಗಳಲ್ಲಿ ಘರ್ಷಣೆಯ ಬಿಂದುಗಳಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವ ಕುರಿತು 2024ರ ಅಕ್ಟೋಬರ್ 21ರಂದು ಮಾಡಿಕೊಂಡ ಒಪ್ಪಂದದ ಬಳಿಕ, ಭಾರತ ಮತ್ತು ಚೀನಾ ಸಂಬಂಧಗಳನ್ನು ಹಂತ ಹಂತವಾಗಿ ಮರುಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಗಾಲ್ವಾನ್ ಸಂಘರ್ಷದ ನಂತರ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಭಾರತ–ಚೀನಾ ಸಂಬಂಧಗಳು, 2024ರ ಒಪ್ಪಂದದ ಬಳಿಕ ವಿಶ್ವಾಸ ವೃದ್ಧಿ ಕ್ರಮಗಳ ಮೂಲಕ ಮುಂದುವರಿಯುತ್ತಿವೆ. ಚೀನಾದೊಂದಿಗೆ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಭಾಗವಾಗಿಯೇ ಇಂತಹ ಅಂತರ-ಪಕ್ಷ ಮತ್ತು ಸಂಘಟನಾ ಮಟ್ಟದ ಸಂವಾದಗಳನ್ನು ಆಯೋಜಿಸಲಾಗುತ್ತಿದೆ.
ವಿರೋಧ ಪಕ್ಷ ಕಾಂಗ್ರೆಸ್ ಚೀನಾದೊಂದಿಗೆ ಹೊಂದಿದ್ದ ನಿಕಟತೆಯನ್ನು ಉಲ್ಲೇಖಿಸಿ ಬಿಜೆಪಿ ಮೇಲೆ ಪದೇಪದೇ ಟೀಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಆಡಳಿತ ಪಕ್ಷ ಮತ್ತು ಅದರ ಸೈದ್ಧಾಂತಿಕ ಪೋಷಕ ಸಂಘಟನೆ RSS ನೊಂದಿಗೆ ಸಿಪಿಸಿ ನಿಯೋಗ ನಡೆಸಿದ ಈ ಸಭೆಗಳು, ಬಿಗಡಾಯಿಸಿದ್ದ ಭಾರತ–ಚೀನಾ ಸಂಬಂಧಗಳ ನಡುವೆ ರಾಜಕೀಯ ಸಂವಹನ ಮಾರ್ಗಗಳನ್ನು ವಿಸ್ತರಿಸುವ ಪ್ರಯತ್ನವೆಂದು ರಾಜಕೀಯ ವಲಯಗಳು ವಿಶ್ಲೇಷಿಸುತ್ತಿವೆ.







