ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ: ನಾಗರಿಕ ವಿಮಾನ ಯಾನ ಸಚಿವಾಲಯ
ಶುಕ್ರವಾರ ಕೆಲ ಕಾಲ ಸ್ಥಗಿತಗೊಂಡಿದ್ದ ಮೈಕ್ರೊಸಾಫ್ಟ್ ವಿಂಡೋಸ್

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಶುಕ್ರವಾರ ಕೆಲ ಕಾಲ ಮೈಕ್ರೊಸಾಫ್ಟ್ ವಿಂಡೋಸ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ದೇಶಾದ್ಯಂತ ವಿಮಾನ ಯಾನ ಸೇವೆ ವ್ಯತ್ಯಯಗೊಂಡಿತ್ತು. ಇದೀಗ ಶನಿವಾರ ಮುಂಜಾನೆ 3 ಗಂಟೆಯಿಂದ ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ನಾಗರಿಕ ವಿಮಾನ ಯಾನ ರಾಜ್ಯ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ಪ್ರಯಾಣದ ಮರು ವ್ಯವಸ್ಥೆ ಹಾಗೂ ಮರುಪಾವತಿ ಪ್ರಕ್ರಿಯೆಗಳ ಕುರಿತು ಕಾಳಜಿ ವಹಿಸಲಾಗಿದೆ ಎಂದೂ ಹೇಳಿದ್ದಾರೆ.
ಮೈಕ್ರೊಸಾಫ್ಟ್ 365 ಹಾಗೂ ಅಝ್ಯೂರ್ ಸೇವೆಗಳಲ್ಲಿನ ವ್ಯತ್ಯಯದಿಂದ ವಿಮಾನ ಯಾನ ವಲಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿತ್ತು. ವಿಮಾನ ಸಂಸ್ಥೆಗಳ ನಿರ್ವಾಹಕರ ಕಂಪ್ಯೂಟರ್ಗಳು ಕಾರ್ಯಾಚರಿಸದಿದ್ದರಿಂದ ಇಂಡಿಗೊ, ಏರ್ ಇಂಡಿಯಾ, ಸ್ಪೈಸ್ ಜೆಟ್ ಹಾಗೂ ಅಕಾಸ ಸೇರಿದಂತೆ ನೂರಾರು ವಿಮಾನಗಳ ಕಾರ್ಯಾಚರಣೆ ವಿಳಂಬಗೊಂಡಿತು ಮತ್ತು ಹಲವು ವಿಮಾನಗಳ ಸೇವೆ ರದ್ದುಗೊಂಡಿದ್ದವು





