ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ನಕಾರಾತ್ಮಕ ಸುದ್ದಿಗಳ ಕುರಿತು ಸತ್ಯಶೋಧನೆ ನಡೆಸಿ: ಅಧಿಕಾರಿಗಳಿಗೆ ಸೂಚಿಸಿದ ಉತ್ತರ ಪ್ರದೇಶ ಸರ್ಕಾರ

ಆದಿತ್ಯನಾಥ್ | Photo : PTI
ಲಕ್ನೊ: ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ನಕಾರಾತ್ಮಕ ಸುದ್ದಿಗಳ ಕುರಿತು ಇನ್ನು ಮುಂದೆ ಜಿಲ್ಲಾಡಳಿತಗಳು ಸತ್ಯಶೋಧನೆ ನಡೆಸಬೇಕಿದೆ. ಶುಕ್ರವಾರ ಬಿಡುಗಡೆ ಮಾಡಿರುವ ಪತ್ರದಲ್ಲಿ ಉತ್ತರ ಪ್ರದೇಶ ಸರ್ಕಾರವು ಇದನ್ನೇ ಅಧಿಕಾರಿಗಳಿಗೆ ಸೂಚಿಸಿದೆ. ಒಂದು ವೇಳೆ ವರದಿಗಳು ವಿರೂಪವಾಗಿರುವುದು ಅಥವಾ ಅಸಮರ್ಪಕ ವಿಷಯಗಳನ್ನು ಪ್ರಸ್ತುತಪಡಿಸಿರುವುದು ಪತ್ತೆಯಾದರೆ, ಅಂತಹ ವರದಿಗಳ ಕುರಿತು ಮಾಧ್ಯಮ ಸಂಸ್ಥೆಗಳಿಂದ ವಿವರಣೆ ಪಡೆಯಬೇಕು ಎಂದು ಈ ಪತ್ರವು ಸೂಚಿಸಿದೆ ಎಂದು newslaundry.com ವರದಿ ಮಾಡಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಈ ಪತ್ರವನ್ನು ಬರೆದಿದ್ದು, ನಕಾರಾತ್ಮಕ ಸುದ್ದಿಗಳ ಕುರಿತು ಸತ್ಯಶೋಧನೆ ನಡೆಸುವಂತೆ ಎಲ್ಲ 18 ವಿಭಾಗೀಯ ಆಯುಕ್ತರು, 75 ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ನಕಾರಾತ್ಮಕ ಸುದ್ದಿಗಳನ್ನು ವಾರದ ಆಧಾರದಲ್ಲಿ ರಾಜ್ಯದ ಕುಂದುಕೊರತೆ ಸ್ಪಂದನೆ ವ್ಯವಸ್ಥೆಗೆ ಅಪ್ಲೋಡ್ ಮಾಡಲಾಗುವುದು ಹಾಗೂ ತನಿಖೆಗಾಗಿ ರಾಜ್ಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಈ ಪತ್ರದಲ್ಲಿ ಹೇಳಲಾಗಿದೆ.
ಈ ವಾರದ ವರದಿಗಳನ್ನು ತನಿಖೆಗಾಗಿ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ವಾರದ ವರದಿಗಳನ್ನು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಇಲಾಖೆಯ ನಿರ್ದೇಶಕರು, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿಕೊಡಲಿದ್ದಾರೆ.
ದಿನಪತ್ರಿಕೆಗಳು ಹಾಗೂ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಕಟವಾಗಿರುವ ನಕಾರಾತ್ಮಕ ಸುದ್ದಿಗಳನ್ನು ರಾಜ್ಯ ಮಾಹಿತಿ ಇಲಾಖೆಯು ಅದಾಗಲೇ ಸಂಗ್ರಹಿಸಿದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ನಕಾರಾತ್ಮಕ ಸುದ್ದಿಗಳನ್ನು ಕ್ಷಿಪ್ರವಾಗಿ ಸತ್ಯಶೋಧನೆಗೊಳಪಡಿಸಬೇಕಾದ ಅಗತ್ಯವಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.
“ದಿನಪತ್ರಿಕೆಗಳು ಅಥವಾ ಮಾಧ್ಯಮ ಸಂಸ್ಥೆಗಳು ವಿರೂಪಗೊಂಡ ಅಥವಾ ಅಸಮರ್ಪಕ ಮಾಹಿತಿಯನ್ನು ಆಧರಿಸಿ ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿರುವುದು ಪತ್ತೆಯಾದರೆ, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಅಂತಹ ಮಾಧ್ಯಮ ಸಂಸ್ಥೆಗಳಿಂದ ವಿವರಣೆ ಪಡೆಯಲಿದ್ದಾರೆ” ಎಂದೂ ಪತ್ರದಲ್ಲಿ ಹೇಳಲಾಗಿದೆ.
ಮಾಧ್ಯಮಗಳನ್ನು ಹತ್ತಿಕ್ಕುವ ಕೃತ್ಯ ಮಾಡುತ್ತಿದೆ ಎಂಬ ಆದಿತ್ಯನಾಥ್ ಸರ್ಕಾರದ ಮೇಲೆ ಆರೋಪವಿದೆ.
ಹಥ್ರಾಸ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತು ವರದಿ ಮಾಡಲು ತೆರಳುತ್ತಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು 2020ರಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಮತ್ತು ಸುಪ್ರೀಂಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡುವವರೆಗೂ ಅವರನ್ನು 800 ದಿನಕ್ಕೂ ಹೆಚ್ಚು ಕಾಲ ಬಂಧನದಲ್ಲಿಡಲಾಗಿತ್ತು.







