ಸಂಘರ್ಷ, ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾದ್ಯಂತ ಹಸಿವಿನ ಬಿಕ್ಕಟ್ಟು ಉಲ್ಬಣ: ವಿಶ್ವಸಂಸ್ಥೆ ವರದಿ ಕಳವಳ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕಳೆದ ವರ್ಷ ಜಾಗತಿಕ ಹಸಿವಿನ ಪ್ರಮಾಣವು ಹೊಸ ಉತ್ತುಂಗವನ್ನು ತಲುಪಿದ್ದು, ಈ ಸಮಸ್ಯೆಗೆ ಸಂಬಂಧಿಸಿದಂತೆ 2025ರ ಮುನ್ನೋಟವು ತೀರಾ ನಿರಾಶದಾಯಕವಾಗಿದೆ ಎಂದು ವಿಶ್ವಸಂಸ್ಥೆ ಪ್ರಾಯೋಜಿತ ವರದಿಯೊಂದು ಕಳವಳ ವ್ಯಕ್ತಪಡಿಸಿದೆ.
2024ರಲ್ಲಿ ಆಹಾರದ ತೀವ್ರ ಅಭದ್ರತೆ ಹಾಗೂ ಮಕ್ಕಳ ಅಪೌಷ್ಟಿಕತೆಯು ಸತತ ಆರನೇ ವರ್ಷವೂ ಏರಿಕೆಯನ್ನು ಕಂಡಿದ್ದು, 53 ದೇಶಗಳು ಹಾಗೂ ಪ್ರಾಂತಗಳ 29.50 ಕೋಟಿಗೂ ಅಧಿಕ ಜನರು ಬಾಧಿತರಾಗಿದ್ದಾರೆಂದು ಶುಕ್ರವಾರ ಬಿಡುಗಡೆಗೊಂಡ 2025ರ ಸಾಲಿನ ಜಾಗತಿಕ ಆಹಾರ ಬಿಕ್ಕಟ್ಟು ವರದಿ (ಜಿಎಫ್ಆರ್ಸಿ) ತಿಳಿಸಿದೆ.
ಸಂಘರ್ಷಗಳು, ಹವಾಮಾನ ವೈಪರೀತ್ಯಗಳು ಹಾಗೂ ಆರ್ಥಿಕ ಆಘಾತಗಳು ಹಸಿವಿನ ಸಮಸ್ಯೆಯ ಪ್ರಮುಖ ಚಾಲಕಶಕ್ತಿಗಳೆಂದು ವರದಿಯು ಗುರುತಿಸಿದೆ.
2024ರಲ್ಲಿ ಸತತ ಆರನೇ ಬಾರಿಗೆ ಹಸಿವಿನ ಮಟ್ಟದಲ್ಲಿ ಏರಿಕೆ ದಾಖಲಾಗಿದ್ದು, 2023ನೇ ಸಾಲಿಗಿಂತ ಶೇ.5ರಷ್ಟು ಹೆಚ್ಚಳವಾಗಿದೆಯೆಂದು ವರದಿ ಹೇಳಿದೆ. ಒಟ್ಟಾರೆಯಾಗಿ ಜಗತ್ತಿನಾದ್ಯಂತ ಹಿಂಸಾಚಾರ, ಕ್ಷಾಮ ಇತ್ಯಾದಿ ಸಮಸ್ಯೆಗಳಿಂದ ಬಾಧಿತವಾದ ಪ್ರದೇಶಗಳಲ್ಲಿ ಶೇ.22.6 ಜನರು ವಿಷಮಸ್ಥಿತಿಯ ಅಥವಾ ಅದಕ್ಕಿಂತಲೂ ಭೀಕರವಾದ ಮಟ್ಟದಲ್ಲಿ ಹಸಿವಿನ ಸಮಸ್ಯೆಯಿಂದ ಬಾಧಿತರಾಗಿದ್ದಾರೆ
ಹಸಿವಿನ ಬಿಕ್ಕಟ್ಟಿಗೆ ಸಂಘರ್ಷವು ಪ್ರಮುಖ ಕಾರಣವಾಗಿದ್ದು, ಇದರಿಂದಾಗಿ 2024ರಲ್ಲಿ 20 ದೇಶಗಳ 14 ಕೋಟಿ ಜನರು ಬಾಧಿತರಾಗಿದ್ದಾರೆ. ಭೀಕರ ಸಂಘರ್ಷಕ್ಕೆ ಸಾಕ್ಷಿಯಾದ ಗಾಝಾ, ದಕ್ಷಿಣ ಸುಡಾನ್, ಹೈಟಿ ಹಾಗೂ ಮಾಲಿ ಇವು ಆಹಾರ ಆಭದ್ರತೆಯ ಮಹಾದುರಂತವನ್ನೇ ಎದುರಿಸುತ್ತಿವೆ. ಸುಡಾನ್ ನಲ್ಲಿ ಹಿಂಸಾಚಾರದ ಜೊತೆಗೆ ಕ್ಷಾಮವೂ ತಾಂಡವವಾಡುತ್ತಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸಿದೆ.
ಹವಾಮಾನ ವೈಪರೀತ್ಯ ಅದರಲ್ಲೂ ನಿರ್ದಿಷ್ಟವಾಗಿ ಎಲ್ ನಿನೋ ಪ್ರೇರಿತವಾದ ಬರ ಹಾಗೂ ನೆರೆಯು 18 ದೇಶಗಳನ್ನು ಹಸಿವಿನ ಬಿಕ್ಕಟ್ಟಿಗೆ ದೂಡಿದೆ. ದಕ್ಷಿಣ ಆಫ್ರಿಕ, ದಕ್ಷಿಣ ಏಶ್ಯ ಹಾಗೂ ಹಾರ್ನ್ ಆಫ್ ಆಫ್ರಿಕ ಪ್ರದೇಶದ 9.60 ಕೋಟಿ ಜನರು ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಆಫ್ಘಾನಿಸ್ತಾನ, ಸುಡಾನ್, ಸಿರಿಯಾ ಹಾಗೂ ಯೆಮನ್ ದೇಶಗಳ ಗರಿಷ್ಠ ಸಂಖ್ಯೆಯ ಜನರು ಆಹಾರದ ತೀವ್ರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ 2024ರಲ್ಲಿ ವಿಶ್ವದಾದ್ಯಂತ ತೀವ್ರವಾದ ಆಹಾರದ ಅಭದ್ರತೆಯನ್ನು ಎದುರಿಸುತ್ತಿರುವ ಜನರ ಸಂಖ್ಯೆಯ ಹೆಚ್ಚುಕಮ್ಮಿ ಮೂರುಪಟ್ಟು ಅಧಿಕವಾಗಿದೆ ಎಂದು ವರದಿ ಹೇಳಿದೆ.
ಅಲ್ಲದೆ, ಸೂಡಾನ್, ಯೆಮನ್, ಮಾಲಿ ಹಾಗೂ ಫೆಲೆಸ್ತೀನ್ ಸೇರಿದಂತೆ ತೀವ್ರವಾದ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿರುವ 26 ರಾಷ್ಟ್ರಗಳು ತೀವ್ರವಾದ ಪೌಷ್ಟಿಕತೆಯ ಸಮಸ್ಯೆಗೂ ತುತ್ತಾಗಿವೆ ಎಂದು ವರದಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ಗಾಝಾ, ಸೂಡಾನ್ನಿಂದ ಹಿಡಿದು ಯೆಮನ್ ಹಾಗೂ ಮಾಲಿವರೆಗೆ, ಸಂಘರ್ಷ ಮತ್ತಿತರ ಅಂಶಗಳು ಅಸಂಖ್ಯ ಕುಟುಂಬಗಳನ್ನು ಹಸಿವಿನ ಅಂಚಿಗೆ ದೂಡಿವೆ. ಇದು ಮಾನವತೆಯ ವೈಫಲ್ಯವಾಗಿದೆ. 21ನೇ ಶತಮಾನದಲ್ಲಿಯೂ ಹಸಿವಿನ ಸಮಸ್ಯೆಯ ಇರುವಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಖಾಲಿ ಹೊಟ್ಟೆಗಳಿಗೆ ಬರಿಗೈಯೊಂದಿಗೆ ನಾವು ಪ್ರತಿಕ್ರಿಯಿಸುವಂತಿಲ್ಲ ಹಾಗೂ ಬೆನ್ನುತಿರುಗಿಸುವಂತಿಲ್ಲ ಎಂದು ಹೇಳಿದ್ದಾರೆ.







