ದಿಲ್ಲಿ ಚುನಾವಣೆ | 70 ಸ್ಥಾನಗಳ ಪೈಕಿ 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ !

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಶನಿವಾರ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 48 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸರಕಾರ ರಚನೆಗೆ ಮುಂದಾಗಿದೆ. ಪಿಟಿಐ ವರದಿಯ ಪ್ರಕಾರ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 699 ಅಭ್ಯರ್ಥಿಗಳಲ್ಲಿ 555(79.39%) ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಆಪ್, ಬಿಜೆಪಿ ಮತ್ತು ಅದರ ಮಿತ್ರಪಕ್ಷ ಜನತಾದಳ(ಯುನೈಟೆಡ್) ಮತ್ತು ಎಲ್ ಜೆಪಿ (ರಾಮ್ ವಿಲಾಸ್) ಪಕ್ಷದ ಎಲ್ಲಾ ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ 70 ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಮಾತ್ರ ಠೇವಣಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2013ರವರೆಗೆ ಸತತವಾಗಿ ಮೂರು ಬಾರಿಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿತ್ತು. 2025ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 70 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ 67 ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಕಸ್ತೂರ್ಬಾ ನಗರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್, ನಂಗ್ಲೋಯಿ ಜಾಟ್ ಕ್ಷೇತ್ರದ ರೋಹಿತ್ ಚೌಧರಿ ಮತ್ತು ಬದ್ಲಿಯ ಕ್ಷೇತ್ರದ ದೇವೇಂದ್ರ ಯಾದವ್ ತಮ್ಮ ಭದ್ರತಾ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜನತಾ ಪ್ರಾತಿನಿಧ್ಯ ಕಾಯ್ದೆ-1951ರ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸಾಮಾನ್ಯ ವರ್ಗದ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ 10,000ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 5,000ರೂ. ಭದ್ರತಾ ಠೇವಣಿಯಾಗಿ ಇಡಬೇಕಾಗುತ್ತದೆ.







