ಅತ್ಯಾಚಾರ ಪ್ರಕರಣ: ಮಾಜಿ ಶಾಸಕನನ್ನು ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್
ಮೇವಾರಂ ಜೈನ್ (Photo credit: hindustantimes.com)
ಜೈಪುರ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ ಮೇವಾರಂ ಜೈನ್ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಮಾನತುಗೊಳಿಸಿದೆ. ಜೈನ್ ಮತ್ತು ಇತರ ಎಂಟು ಜನರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ನಿರ್ಧಾರ ಪ್ರಕಟಿಸಿದೆ.
ಜೈನ್ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಆದೇಶ ಹೊರಡಿಸಿದ್ದಾರೆ.
ಬಾರ್ಮರ್ನ ಮಾಜಿ ಶಾಸಕ ಮೇವಾರಂ ಜೈನ್ ಅವರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ದೋತಸ್ರಾ ಆದೇಶದಲ್ಲಿ ತಿಳಿಸಿದ್ದಾರೆ.
ತನ್ನ ಹದಿಹರೆಯದ ಮಗಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜೈನ್ ಮತ್ತು ಆರ್ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಮಹಿಳೆಯೊಬ್ಬರು ಡಿಸೆಂಬರ್ 2023 ರಲ್ಲಿ ದೂರು ದಾಖಲಿಸಿದ್ದರು.