ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಲು ಕಾಂಗ್ರೆಸ್ನಿಂದ ಮೇ 20 ರಿಂದ 30ರವರೆಗೆ 'ಜೈ ಹಿಂದ್ ಸಭೆ'
ಟ್ರಂಪ್ ಹೇಳಿಕೆಗಳ ಬಗ್ಗೆ ಪ್ರಧಾನಿಯ ಮೌನದ ಬಗ್ಗೆಯೂ ಪ್ರಶ್ನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಲು ಕಾಂಗ್ರೆಸ್ ಪಕ್ಷವು ಮೇ 20 ರಿಂದ ಮೇ 30ರವರೆಗೆ ಭಾರತದಾದ್ಯಂತ 'ಜೈ ಹಿಂದ್ ಸಭೆ'ಗಳನ್ನು ನಡೆಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ʼನಮ್ಮ ಸಶಸ್ತ್ರ ಪಡೆಗಳ ಅತ್ಯುನ್ನತ ಶೌರ್ಯ ಮತ್ತು ಯಶಸ್ಸಿಗೆ ನಮನ ಸಲ್ಲಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದಾದ್ಯಂತ 'ಜೈ ಹಿಂದ್ ಸಭೆ'ಗಳನ್ನು ನಡೆಸಲಿದೆ. ಭದ್ರತಾ ಲೋಪಗಳು, ರಾಷ್ಟ್ರೀಯ ಭದ್ರತೆಯನ್ನು ಸರಕಾರ ನಿರ್ವಹಿಸುವ ರೀತಿ ಮತ್ತು ನಮ್ಮ ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ಸರಕಾರದ ಮೌನದ ಬಗ್ಗೆಯೂ ನಾವು ಪ್ರಶ್ನೆಗಳನ್ನು ಕೇಳಬೇಕುʼ ಎಂದು ಹೇಳಿದ್ದಾರೆ.
ಮೇ 20 ರಿಂದ 30ರವರೆಗೆ ದಿಲ್ಲಿ, ಬಾರ್ಮರ್, ಶಿಮ್ಲಾ, ಹಲ್ದ್ವಾನಿ, ಪಾಟ್ನಾ, ಜಬಲ್ಪುರ್, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗುವಾಹಟಿ, ಕೋಲ್ಕತ್ತಾ, ಹೈದರಾಬಾದ್, ಭುವನೇಶ್ವರ ಮತ್ತು ಪಠಾಟ್ಕೋಟ್ನಲ್ಲಿ ಜೈ ಹಿಂದ್ ಸಭೆ ನಡೆಯಲಿದೆ. ಇದರಲ್ಲಿ ನಿವೃತ್ತ ಸೇನಾಧಿಕಾರಿಗಳು, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಪ್ರಧಾನಿಯವರ ಮೌನವನ್ನು ಪ್ರಶ್ನಿಸಿದೆ.