ಗುಜರಾತ್ | ಆಪ್ ಶಾಸಕನ ಮೇಲೆ ಶೂ ಎಸೆದ ಕಾಂಗ್ರೆಸ್ ಕಾರ್ಯಕರ್ತ: ಆರೋಪಿಗೆ ಥಳಿತ

Screengrab:X/@TheSiasatDaily
ಅಹಮದಾಬಾದ್: ವಿಶ್ವದರ್ ವಿಧಾನಸಭಾ ಕ್ಷೇತ್ರ ಆಪ್ ಶಾಸಕ ಗೋಪಾಲ್ ಇಟಾಲಿಯಾ ಮೇಲೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಶೂ ಎಸೆದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜಾಮ್ನಗರದಲ್ಲಿ ಆಯೋಜನೆಗೊಂಡಿದ್ದ ಸಭೆಯೊಂದರಲ್ಲಿ ನಡೆದಿದೆ.
ಜಾಮ್ನಗರದ ಟೌನ್ ಹಾಲ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಜಾಮ್ನಗರ್ ನಗರ ಪಾಲಿಕೆಯ ವಾರ್ಡ್ ನಂ. 12ರ ಕಾಂಗ್ರೆಸ್ ಕೌನ್ಸಿಲರ್ ಫೆಮಿದಾಬೆನ್ ಜುನೇಜಾ, ಅಸ್ಲಾಂ ಖಿಲ್ಜಿ ಹಾಗೂ ವಕೀಲ ಜನಾಬೆನ್ ಖಾಫಿ ಅವರು ತಮ್ಮ ಬೆಂಬಲಿಗರೊಂದಿಗೆ ಆಪ್ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ, ಸಭೆಯನ್ನುದ್ದೇಶಿಸಿ ಇಟಾಲಿಯಾ ಮಾತನಾಡಲು ಪ್ರಾರಂಭಿಸಿದಾಗ, ವೇದಿಕೆಯ ಸನಿಹವೇ ನೆಲದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮೇಲೆದ್ದು ನಿಂತು ಅವರತ್ತ ಶೂ ಎಸೆದಿದ್ದಾನೆ. ಆದರೆ, ಅದರ ಎಸೆತದಿಂದ ತಪ್ಪಿಸಿಕೊಂಡ ಇಟಾಲಿಯಾ, ಸುರಕ್ಷಿತವಾಗಿ ಪಾರಾದರು. ಇದರ ಬೆನ್ನಿಗೇ, ವೇದಿಕೆಯ ಮೇಲಿದ್ದ ಆಪ್ ನಾಯಕರು ಆತನನ್ನು ಸೆರೆ ಹಿಡಿದು, ಆತನನ್ನು ಥಳಿಸಲು ಪ್ರಾರಂಭಿಸಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದು, ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ, ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಜಾಮ್ನಗರ್ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಛತ್ರಪಾಲ್ ಸಿನ್ಹ್ ಎಂದು ಗುರುತಿಸಲಾಗಿದೆ.
ಈ ಘಟನೆಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೈವಾಡವಿದೆ ಎಂದು ಆಪ್ ಆರೋಪಿಸಿದೆ. ಆದರೆ, ಈ ಘಟನೆಯನ್ನು ಖಂಡಿಸಿರುವ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮಿತ್ ಚಾವ್ಡಾ, ಈ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
A man threw a shoe at AAP MLA Gopal Italia during a meeting in Jamnagar, Gujarat, briefly causing chaos. Police quickly restrained him, restored order, and some chairs were damaged in the commotion. pic.twitter.com/ZYf5O48E9B
— The Siasat Daily (@TheSiasatDaily) December 6, 2025







