ಕಾಶ್ಮೀರ ವಿಷಯದಲ್ಲಿ ಮೂರನೆಯವರ ಮಧ್ಯಸ್ಥಿಕೆಯ ಕುರಿತು ಕೇಂದ್ರ ಸರಕಾರದಿಂದ ಸ್ಪಷ್ಟನೆ ಕೋರಿದ ಕಾಂಗ್ರೆಸ್

ಕೆ.ಸಿ.ವೇಣುಗೋಪಾಲ್ | PTI
ತಿರುವನಂತಪುರಂ: ಕಾಶ್ಮೀರ ವಿಷಯದಲ್ಲೇನಾದರೂ ಮೂರನೆಯವರ ಮಧ್ಯಸ್ಥಿಕೆಗೆ ಬಾಗಿಲು ತೆರೆದಿದೆಯೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೋಮವಾರ ಕೇಂದ್ರ ಸರಕಾರವನ್ನು ಆಗ್ರಹಿಸಿರುವ ಕಾಂಗ್ರೆಸ್, ಇಂತಹ ನಿಲುವಿನಿಂದ ಶಿಮ್ಲಾ ಒಪ್ಪಂದದ ಗಂಭೀರ ಉಲ್ಲಂಘನೆಯಾಗಲಿದೆ ಎಂದೂ ಎಚ್ಚರಿಸಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿದೇಶಾಂಗ ನೀತಿಯಲ್ಲೇನಾದರೂ ಮಾರ್ಪಾಡಾಗಿದೆಯೆ ಎಂಬುದನ್ನು ತಿಳಿಯಲು ನಮ್ಮ ಪಕ್ಷ ಬಯಸುತ್ತದೆ. ಹೀಗಾಗಿ, ಈ ವಿಷಯವನ್ನು ಆದಷ್ಟೂ ಶೀಘ್ರವಾಗಿ ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಕಾಶ್ಮೀರ ವಿಷಯದಲ್ಲಿ ತಾನು ಮಧ್ಯಸ್ಥಿಕೆ ವಹಿಸಿದೆ ಎಂದು ಪ್ರತಿದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳತ್ತ ಬೊಟ್ಟು ಮಾಡಿದ ಅವರು, ಈ ವಿಷಯದ ಕುರಿತು ಕೇಂದ್ರ ಸರಕಾರ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
"ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ಸಮಸ್ಯೆಯಲ್ಲಿ ಮೂರನೆಯ ವ್ಯಕ್ತಿ ಭಾಗಿಯಾಗುವುದನ್ನು ತಿರಸ್ಕರಿಸುವ ಶಿಮ್ಲಾ ಒಪ್ಪಂದವೇನಾದರೂ ಉಲ್ಲಂಘನೆಯಾಗಿದೆಯೆ? ಈ ವಿಷಯದಲ್ಲಿ ನಾನು ಮಧ್ಯಪ್ರವೇಶ ಮಾಡಿದೆ ಎಂದು ಡೊನಾಲ್ಡ್ ಟ್ರಂಪ್ ಪ್ರತಿ ದಿನ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ನಾವು ಸರಕಾರದಿಂದ ಸ್ಪಷ್ಟನೆ ಬಯಸುತ್ತೇವೆ" ಎಂದು ಅವರು ಒತ್ತಿ ಹೇಳಿದರು.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ವಾಯು ದಾಳಿ ನಡೆಸಿ, ಕನಿಷ್ಠ ಒಂಬತ್ತು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇದರ ಬೆನ್ನಿಗೇ, ಪಾಕಿಸ್ತಾನ ಸೇನೆಯು ಶೆಲ್ ದಾಳಿ ಹಾಗೂ ಡ್ರೋನ್ ದಾಳಿ ನಡೆಸಿದ್ದರಿಂದ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು.
ಇದಾದ ಮೂರು ದಿನಗಳ ನಂತರ, ಮೇ 10ರ ಸಂಜೆ 5 ಗಂಟೆಯಿಂದ ಕದನ ವಿರಾಮ ಘೋಷಿಸಲು ಉಭಯ ದೇಶಗಳ ನಡುವೆ ಒಪ್ಪಂದವೇರ್ಪಟ್ಟಿತ್ತು. ಈ ಒಪ್ಪಂದವೇರ್ಪಡಲು ತನ್ನ ಮಧ್ಯಸ್ಥಿಕೆ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ದಿನ ಪ್ರತಿಪಾದಿಸುತ್ತಿರುವುದರಿಂದ, ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಶಿಮ್ಲಾ ಒಪ್ಪಂದವೇನಾದರೂ ಉಲ್ಲಂಘನೆಯಾಗಿದೆಯೆ ಎಂಬ ಸಾರ್ವತ್ರಿಕ ಕಳವಳ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡಾ ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದೃ ಸರಕಾರವನ್ನು ಆಗ್ರಹಿಸಿದೆ.







