"ಸರಕಾರವು ಆಟವಾಡುತ್ತಿದೆ": ಪಕ್ಷವು ಹೆಸರಿಸಿದ್ದ ನಾಲ್ವರನ್ನು ಬಿಟ್ಟು ಸರ್ವಪಕ್ಷ ನಿಯೋಗಗಳ ಮುಖ್ಯಸ್ಥರನ್ನು ಘೋಷಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ
"ಕಾಂಗ್ರೆಸ್ನಲ್ಲಿರುವುದು ಮತ್ತು ಕಾಂಗ್ರೆಸಿಗರಾಗಿರುವುದರ ನಡುವೆ ಆಕಾಶ-ಭೂಮಿಯ ಅಂತರವಿದೆ"

ಶಶಿ ತರೂರ್, ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ: ಪಕ್ಷವು ಹೆಸರಿಸಿದ್ದ ನಾಲ್ವರನ್ನು ಬಿಟ್ಟು ಸರ್ವಪಕ್ಷ ನಿಯೋಗಗಳ ಮುಖ್ಯಸ್ಥರನ್ನು ಘೋಷಿಸುವ ಮೂಲಕ ಸರಕಾರವು ‘ಕುಚೇಷ್ಟೆಯ ಮನಃಸ್ಥಿತಿ’ಯೊಂದಿಗೆ ಆಟವಾಡುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರತಿನಿಧಿಗಳಾಗಿ ಹೆಸರಿಸಿದ್ದ ನಾಲ್ವರಲ್ಲಿ ಶಶಿ ತರೂರ್ ಹೆಸರು ಇರಲಿಲ್ಲ, ಆದಾಗ್ಯೂ ಅವರನ್ನು ನಿಯೋಗದ ನಾಯಕರಾಗಿ ಕೇಂದ್ರವು ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ದಾಳಿ ನಡೆಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಕಾಂಗ್ರೆಸ್ನಲ್ಲಿರುವುದು ಮತ್ತು ಕಾಂಗ್ರೆಸಿಗರಾಗಿರುವುದರ ನಡುವೆ ಆಕಾಶ-ಭೂಮಿಯ ಅಂತರವಿದೆ. ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರನ್ನೂ ನಿಯೋಗದ ಭಾಗವಾಗುವಂತೆ ಸರಕಾರವು ಸಂಪರ್ಕಿಸಿತ್ತು. ಆದರೆ ಅದನ್ನು ಪಕ್ಷವೇ ನಿರ್ಧರಿಸಬೇಕು ಎಂದು ಅವರು ಸ್ಪಷ್ಟವಾಗಿ ಸರಕಾರಕ್ಕೆ ತಿಳಿಸಿದ್ದರು ಎಂದು ಹೇಳಿದರು.
ಪಕ್ಷವನ್ನು ಸಂಪರ್ಕಿಸದೆ ನೀವು (ಸರಕಾರ) ನಿಯೋಗಗಳಲ್ಲಿ ಸಂಸದರ ಹೆಸರುಗಳನ್ನು ಸೇರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದರನ್ನು ಅಧಿಕೃತ ನಿಯೋಗದ ಭಾಗವಾಗಿಸಿದಾಗ ಸಂಸದರು ಪಕ್ಷದ ಒಪ್ಪಿಗೆ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ ರಮೇಶ್, ಸರಕಾರವು ‘ನಾರದ ಮುನಿಯ ರಾಜಕೀಯ’ ವನ್ನು ಆಡುತ್ತಿದೆ ಎಂದು ಆರೋಪಿಸಿದರು.
ಇತ್ತೀಚಿನ ಘಟನೆಗಳ ಕುರಿತು ನಮ್ಮ ದೇಶದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಐದು ಪ್ರಮುಖ ದೇಶಗಳಿಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸುವಂತೆ ಸರಕಾರದ ಆಹ್ವಾನವು ನನಗೆ ಗೌರವವನ್ನು ತಂದಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳು ಒಳಗೊಂಡಿದ್ದಾಗ ಮತ್ತು ನನ್ನ ಸೇವೆಗಳ ಅಗತ್ಯವಿದ್ದಾಗ ನಾನು ಸದಾ ಸಿದ್ಧ. ಜೈಹಿಂದ್.
- ಶಶಿ ತರೂರ್,ಕಾಂಗ್ರೆಸ್ ಸಂಸದ







