ಭಾರತ-ಅಮೆರಿಕ ಸಂಬಂಧದ ಬಿರುಕಿನ ಪ್ರಯೋಜನ ಪಡೆಯಲು ಚೀನಾ ಯತ್ನ: ಕಾಂಗ್ರೆಸ್ ಆರೋಪ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ, ಆ. 29: ಚೀನಾದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಭಾರತದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ ಹಾಗೂ ಭಾರತ-ಅಮೆರಿಕ ಸಂಬಂಧದಲ್ಲಿ ಉಂಟಾಗಿರುವ ಬಿರುಕಿನ ಪ್ರಯೋಜನ ಪಡೆಯಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅದು ಬಣ್ಣಿಸಿದೆ.
ಈಗ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬಳಿಕ ಚೀನಾಕ್ಕೆ ಭೇಟಿ ನೀಡಲಿದ್ದಾರೆ.
ಮಣಿಪುರದ ಜನರು ದೀರ್ಘಾವಧಿಯಿಂದ ಬಳಲುತ್ತಿದ್ದು, ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುವುದನ್ನು ಈಗಲೂ ಎದುರು ನೋಡುತ್ತಿದ್ದಾರೆ ಎಂದು ಪ್ರತಿಪಕ್ಷ ಹೇಳಿದೆ. ಆದರೆ, ಮೋದಿಯವರು ರಾಜ್ಯದೊಂದಿಗೆ ತನಗಿರುವ ಸಂಬಂಧವನ್ನು ತೊಡೆದುಹಾಕಿದ್ದಾರೆ ಎಂದು ಅದು ಹೇಳಿದೆ.
‘‘ಪದೇ ಪದೇ ವಿದೇಶ ಪ್ರವಾಸ ಮಾಡುತ್ತಿರುವ ಪ್ರಧಾನಿ ಈಗ ಜಪಾನ್ ಮತ್ತು ಚೀನಾ ಪ್ರವಾಸ ಆರಂಭಿಸಿದ್ದಾರೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘‘ಅವರ ಚೀನಾ ಭೇಟಿಯು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಚೀನಾದೊಂದಿಗಿನ ಸಂಬಂಧವನ್ನು, ಮುಖ್ಯವಾಗಿ ಅವರು ಹಾಕುವ ಶರತ್ತುಗಳಂತೆ ಸಾಮಾನ್ಯಗೊಳಿಸಲು ನಮ್ಮನ್ನು ಬಲವಂತಪಡಿಸಲಾಗುತ್ತಿದೆ. ಭಾರತ-ಚೀನಾ ಸಂಬಂಧದಲ್ಲಿ ಉಂಟಾಗಿರುವ ಹಿನ್ನಡೆಯ ಲಾಭವನ್ನು ಪಡೆಯಲು ಚೀನಾ ಪ್ರಯತ್ನಿಸುತ್ತಿದೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ರಮೇಶ್ ಹೇಳಿದ್ದಾರೆ.
‘‘ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆಯ ವೇಳೆ ಚೀನಾ ನಡೆಸಿದ ಜುಗಲ್ ಬಂದಿಯನ್ನು ಸ್ವತಃ ನಮ್ಮ ಸೇನೆಯೇ ಬಹಿರಂಗಪಡಿಸಿದೆ. ಆದರೆ, ಈಗ ಅದನ್ನು ಮರೆಯಲಾಗಿದೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಪ್ರಧಾನಿ ಮೋದಿ ತನ್ನ ಪ್ರವಾಸದ ಮೊದಲ ಹಂತದಲ್ಲಿ, ಆಗಸ್ಟ್ 29 ಮತ್ತು 30ರಂದು ಜಪಾನ್ಗೆ ಭೇಟಿ ನೀಡುತ್ತಿದ್ದಾರೆ. ಅವರು ಶುಕ್ರವಾರ ಟೋಕಿಯೊ ತಲುಪಿದ್ದಾರೆ. ಬಳಿಕ, ಎರಡನೇ ಹಂತದಲ್ಲಿ ಅವರು ಆಗಸ್ಟ್ 31 ಮತ್ತು ಸೆಪ್ಟಂಬರ್ 1ರಂದು ಚೀನಾ ಪ್ರವಾಸ ಮಾಡುತ್ತಾರೆ. ಚೀನಾದ ಟಿಯಾನ್ಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.







