ಡಿಎಂಕೆಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆಗೆ ಐವರು ಸದಸ್ಯರ ಸಮಿತಿ ರೂಪಿಸಿದ ಕಾಂಗ್ರೆಸ್

ಮಲ್ಲಿಕಾರ್ಜುನ ಖರ್ಗೆ | Photo Credit ; PTI
ಹೊಸದಿಲ್ಲಿ, ನ. 22: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಡಿಎಂಕೆಯೊಂದಿಗೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಐವರು ಸದಸ್ಯರ ಸಮಿತಿಯೊಂದನ್ನು ರೂಪಿಸಿದ್ದಾರೆ.
ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂತಂಗೈ ಅವರು ಶನಿವಾರ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಹಾಗೂ ಪುದುಚೇರಿಯ ಪಕ್ಷದ ಉಸ್ತುವಾರಿ ಗಿರೀಶ್ ಚೋಂಡಂಕರ್ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಸೆಲ್ವಪೆರುಂತಂಗೈ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಸ್. ರಾಜೇಶ್ ಕುಮಾರ್ ಅವರು ಕೂಡ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸಮಿತಿ ನಿಯೋಜಿಸಿರುವುದಕ್ಕೆ ಕಾಂಗ್ರೆಸ್ನ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪಕ್ಷದ ಹೈ ಕಮಾಂಡ್ ಅನ್ನು ಶ್ಲಾಘಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ನಡೆ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟನ್ನು ಸಶಕ್ತಗೊಳಿಸಲಿದೆ ಎಂದು ಚಿದಂಬರಂ ಹೇಳಿದ್ದಾರೆ.





