ಕೇಂದ್ರದಿಂದ ಟಾಗೋರ್ ಗೆ ಅವಮಾನದೊಂದಿಗೆ ಆರಂಭಗೊಂಡ ಚಳಿಗಾಲದ ಅಧಿವೇಶನ ಗಾಂಧಿಗೆ ಅವಮಾನದೊಂದಿಗೆ ಅಂತ್ಯ: ಕಾಂಗ್ರೆಸ್

Photo Credit ; PTI
ಹೊಸದಿಲ್ಲಿ,ಡಿ.19: ಸಂಸತ್ತಿನ ಚಳಿಗಾಲದ ಅಧಿವೇಶನವು ಶುಕ್ರವಾರ ಮುಕ್ತಾಯಗೊಂಡ ಬೆನ್ನಿಗೇ ಕಾಂಗ್ರೆಸ್ ಪಕ್ಷವು,ಕೇಂದ್ರ ಸರಕಾರವು ರವೀಂದ್ರನಾಥ ಟಾಗೋರ್ ಅವರನ್ನು ಅವಮಾನಿಸುವುದರೊಂದಿಗೆ ಆರಂಭಗೊಂಡಿದ್ದ ಅಧಿವೇಶನವು ಮಹಾತ್ಮಾ ಗಾಂಧಿಯವರಿಗೆ ಅವಮಾನದೊಂದಿಗೆ ಅಂತ್ಯಗೊಂಡಿದೆ ಎಂದು ಆರೋಪಿಸಿದೆ.
ಅಧಿವೇಶನವನ್ನು ‘ಪ್ರದೂಷಣ ಕಾಲೀನ(ಮಾಲಿನ್ಯ ಸಂದರ್ಭದ)’ ಎಂದು ಬಣ್ಣಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು,ವಾಯು ಮಾಲಿನ್ಯ ಕುರಿತು ಚರ್ಚೆಗೆ ಕಾಂಗ್ರೆಸ್ ಪಕ್ಷವು ಸಿದ್ಧವಾಗಿತ್ತು,ಆದರೆ ಸರಕಾರವು ಇಂತಹ ಚರ್ಚೆಯಿಂದ ನುಣುಚಿಕೊಂಡಿದೆ ಎಂದು ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಣಿಪುರ ಮತ್ತು ಅನುದಾನಗಳಿಗಾಗಿ ಪೂರಕ ಬೇಡಿಕೆ ಕುರಿತು ಎರಡು ಔಪಚಾರಿಕ ಮಸೂದೆಗಳು ಸೇರಿದಂತೆ 14 ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಮಗೆ ತಿಳಿಸಲಾಗಿತ್ತು. ಎರಡು ಔಪಚಾರಿಕ ಮಸೂದೆಗಳನ್ನು ಬಿಟ್ಟರೆ ಉಳಿದ 12 ಮಸೂದೆಗಳ ಪೈಕಿ ಐದನ್ನು ಮಂಡಿಸಲಾಗಿಲ್ಲ. ಅವರು ಮಸೂದೆಗಳನ್ನು ಮಂಡಿಸಲು ಬಯಸಿರದಿದ್ದಾಗ ಈ ಮಾಹಿತಿಯನ್ನು ನಮಗೇಕೆ ನೀಡಿದ್ದರು ಎನ್ನುವುದು ನನಗೆ ತಿಳಿದಿಲ್ಲ’ ಎಂದು ಹೇಳಿದರು.
‘ಸಭೆಯು ಔಪಚಾರಿಕವಾಗಿದೆ ಮತ್ತು ಸಾಮಾನ್ಯವಾಗಿ ಅಧಿವೇಶನದ ಅಂತ್ಯದಲ್ಲಿ ಸರಕಾರವು ‘ಬ್ರಹ್ಮೋಸ್ ಕ್ಷಿಪಣಿ’ಯನ್ನು ಪ್ರಯೋಗಿಸುತ್ತದೆ ಎಂದು ಸರ್ವಪಕ್ಷ ಸಭೆಯಲ್ಲಿ ನಾನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಹೇಳಿದ್ದೆ. ಈ ಸಲವೂ ಹಾಗೆಯೇ ಆಯಿತು. ಅಧಿವೇಶನದ ಅಂತ್ಯದಲ್ಲಿ ಮಸೂದೆಯನ್ನು ತರಲಾಗಿತ್ತು ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಅದನ್ನು ಅಂಗೀಕರಿಸಲಾಗಿದೆ’ ಎಂದು ವಿಬಿ-ಜಿ ರಾಮ್ ಜಿ ಮಸೂದೆಯನ್ನು ಉಲ್ಲೇಖಿಸಿ ರಮೇಶ್ ಹೇಳಿದರು.
ಅಧಿವೇಶನದಲ್ಲಿ ವಂದೇ ಮಾತರಂ ಕುರಿತು ಚರ್ಚೆಯು ಸಂಪೂರ್ಣವಾಗಿ ನೆಹರು ಅವರಿಗೆ ಅವಮಾನ ಮತ್ತು ಇತಿಹಾಸದ ತಿರುಚುವಿಕೆಯನ್ನೇ ಕೇಂದ್ರೀಕರಿಸಿತ್ತು ಎಂದು ಹೇಳಿದ ರಮೇಶ,ಟಾಗೋರ್ ಅವರನ್ನು ಅವಮಾನಿಸಲಾಯಿತು. ಟಾಗೋರ್ ಅವರ ಶಿಫಾರಸಿನ ಮೇರೆಗೆ 1937ರಲ್ಲಿ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯಾಗಿ ಹಾಡುವುದನ್ನು ನಿರ್ಧರಿಸಲಾಗಿತ್ತು ಎಂದರು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೂ ಅವಮಾನಿಸಲಾಗಿತ್ತು ಎಂದು ಅವರು ಹೇಳಿದರು.
ಅಧಿವೇಶನವು ಗಾಂಧಿಯವರಿಗೆ ಅವಮಾನದೊಂದಿಗೆ ಅಂತ್ಯಗೊಂಡಿತು ಎಂದು ಹೇಳಿದ ರಮೇಶ್ ಯುಪಿಎ ಕಾಲದ ಎಂನರೇಗಾದ ಬದಲಿಗೆ ಜಿ ರಾಮ್ ಜಿ ಮಸೂದೆಯ ಅಂಗೀಕಾರವನ್ನು ಪ್ರಸ್ತಾವಿಸಿ,ಆಧುನಿಕ ಭಾರತವನ್ನು ನಿರ್ಮಿಸಿದ ಮೂವರು ವ್ಯಕ್ತಿಗಳನ್ನು ಅವಮಾನಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಕಾರ್ಯತಂತ್ರವಾಗಿತ್ತು ಎಂದರು.







