ಬಿಜೆಪಿ ಆಡಳಿತ ಜಾತಿ, ಧರ್ಮದ ಆಧಾರದಲ್ಲಿ ದ್ವೇಷ ಹರಡುತ್ತಿದೆ: ಕಾಂಗ್ರೆಸ್

ರಾಜೇಂದ್ರ ಪಾಲ್ ಗೌತಮ್ | Photo Credit : ANI
ಹೊಸದಿಲ್ಲಿ, ಜ. 12: ಮೀರತ್ ನಲ್ಲಿ ನಡೆದ ದಲಿತ ಮಹಿಳೆಯ ಹತ್ಯೆ ಘಟನೆ ಕುರಿತಂತೆ ಕಾಂಗ್ರೆಸ್ ಉತ್ತರಪ್ರದೇಶದ ಆದಿತ್ಯನಾಥ್ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಎಸ್ಸಿ (ಪರಿಶಿಷ್ಟ ಜಾತಿ) ವಿಭಾಗದ ಮುಖ್ಯಸ್ಥ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ಆಡಳಿತ ದೇಶದಲ್ಲಿ ಜಾತಿ ಹಾಗೂ ಧರ್ಮದ ಆಧಾರದಲ್ಲಿ ದ್ವೇಷ ಹರಡುತ್ತಿದೆ ಎಂದು ಹೇಳಿದ್ದಾರೆ.
‘‘ಉತ್ತರಪ್ರದೇಶದ ಮುಖ್ಯಮಂತ್ರಿ ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಹಿಂದುಳಿದ ವರ್ಗದವರನ್ನು ಹತ್ತಿಕ್ಕಲು ರಾಜ್ಯ ಸರಕಾರದ ವ್ಯವಸ್ಥೆಯನ್ನು ಬಹಿರಂಗವಾಗಿ ಬಳಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿಯ ಬುಲ್ಡೋಜರ್ ಜಾತಿ ಹಾಗೂ ಧರ್ಮವನ್ನು ಪರಿಗಣಿಸಿದ ನಂತರವೇ ಕಾರ್ಯನಿರ್ವಹಿಸುತ್ತದೆ. ರಾಜ್ಯದಲ್ಲಿ ದಲಿತನೊಬ್ಬ ದಬ್ಬಾಳಿಕೆಗೆ ಒಳಗಾದಾಗ ಅವರ ಬುಲ್ಡೋಜರ್ ಚಲಿಸುವುದಿಲ್ಲ’’ ಎಂದು ಅವರು ಆರೋಪಿಸಿದ್ದಾರೆ.
‘‘ಮೀರತ್ನಲ್ಲಿ ಒಬ್ಬ ಬಾಲಕಿ ತನ್ನ ತಾಯಿಯೊಂದಿಗೆ ಕಾಡಿಗೆ ಹೋಗುತ್ತಿದ್ದ ವೇಳೆ ಬಾಲಕಿಯನ್ನು ಅಪಹರಿಸಲಾಯಿತು. ಮಗಳನ್ನು ರಕ್ಷಿಸಲು ಪ್ರಯತ್ನಿಸಿದ ತಾಯಿಯನ್ನು ಬರ್ಬರವಾಗಿ ಹತ್ಯೆಗೈಯಲಾಯಿತು. ನಾವು ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಲು ತೆರಳಿದಾಗ ನಮಗೆ ತಡೆ ಒಡ್ಡಲಾಯಿತು’’ ಎಂದು ಗೌತಮ್ ಹೇಳಿದ್ದಾರೆ.
ಉತ್ತರಪ್ರದೇಶದ ಪೊಲೀಸರು ಅಪರಾಧಗಳನ್ನು ತಡೆಗಟ್ಟುವಲ್ಲಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಖಚಿತಪಡಿಸಿಕೊಳ್ಳುವಲ್ಲಿ ಅದೇ ಶ್ರದ್ಧೆ ತೋರಿಸಿದರೆ ಅಪರಾಧಗಳು ಸಂಪೂರ್ಣವಾಗಿ ನಿಲ್ಲುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳು ದಲಿತರು, ಬುಡಕಟ್ಟು ಜನರು ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ ಮುಖ್ಯಮಂತ್ರಿ 24 ಗಂಟೆಗಳೊಳಗೆ ಅವರ ಮನೆಗಳನ್ನು ಬುಲ್ಡೋಝರ್ ಮೂಲಕ ಕೆಡವುತ್ತಾರೆ ಎಂದು ಅವರು ತಿಳಿಸಿದ್ದಾರೆ.
‘‘ಜಾತಿ, ಧರ್ಮವನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬಾರದು. ಇದರಿಂದ ದೇಶ ದುರ್ಬಲವಾಗುತ್ತದೆ. ಪರಿಸ್ಥಿತಿ ಹೇಗಿದೆ ಎಂದರೆ, 2022ರ ನಂತರ ದಲಿತರ ಮೇಲಿನ ದಬ್ಬಾಳಿಕೆಯ ದತ್ತಾಂಶವನ್ನು ಸರಕಾರ ಬಿಡುಗಡೆ ಮಾಡಿಲ್ಲ. ಇದು ಸರಕಾರದ ಸಂಪೂರ್ಣ ವೈಫಲ್ಯ’’ ಎಂದು ಗೌತಮ್ ಹೇಳಿದ್ದಾರೆ.







