ಸಕಾರಾತ್ಮಕ ಕಾರ್ಯಸೂಚಿಯೊಂದಿಗೆ ಮುಂದುವರಿಯುತ್ತೇವೆ: ಮಲ್ಲಿಕಾರ್ಜುನ ಖರ್ಗೆ
ಗುಜರಾತ್ ನಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಕಾಂಗ್ರೆಸ್ ಸಭೆ

Photo: PTI
ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ, ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧತೆ ಕುರಿತಂತೆ ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಗುಜರಾತ್ ಕಾಂಗ್ರೆಸ್ ನಾಯಕರ ಸಭೆ ಶನಿವಾರ ನಡೆಯಿತು.
ಈ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷವನ್ನು ಸುದೃಢಗೊಳಿಸುವ ಸಕಾರಾತ್ಮಕ ಕಾರ್ಯಸೂಚಿಯೊಂದಿಗೆ ನಾವು ಮುಂದುವರಿಯುತ್ತೇವೆ ಎಂದರು.
ಗುಜರಾತ್ ನಲ್ಲಿ ಪಕ್ಷ ಎದುರಿಸುತ್ತಿರುವ ಸವಾಲುಗಳು ಹಾಗೂ ಬಿಜೆಪಿಯ ದುರಾಡಳಿತವನ್ನು ಜನರ ಮುಂದಿಡುವ ಮಾರ್ಗಗಳ ಬಗ್ಗೆ ಚರ್ಚೆ ನಡೆದವು.
ಇದು ಪ್ರತಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ತನ್ನನ್ನು ತಾನು ಸಿದ್ಧಪಡಿಸಲು ಕಾಂಗ್ರೆಸ್ ಆಯೋಜಿಸಿದ ಸಭೆಗಳ ಸರಣಿಯ ಭಾಗವಾಗಿದೆ.
ಸಭೆಯ ಬಳಿಕ ‘x’ನಲ್ಲಿ ಟ್ವೀಟ್ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ‘‘ಗುಜರಾತ್ ನಲ್ಲಿ ಬಿಜೆಪಿ ಸರಕಾರದ ದುರಾಡಳಿತ ಮುಂದುವರಿದಿರುವುದರಿಂದ ನಿರುದ್ಯೋಗ, ಹಣದುಬ್ಬರ, ಆರ್ಥಿಕ ಅಸಮಾನತೆ, ದಲಿತರು ಹಾಗೂ ಬುಡಕಟ್ಟುಗಳ ವಿರುದ್ಧ ದೌರ್ಜನ್ಯ, ವಂಚನೆ, ಅಗಾಧ ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ’’ ಎಂದಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಐಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್ ಹಾಗೂ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ ಗೋಹಿಲ್ ಪಾಲ್ಗೊಂಡಿದ್ದರು.







