ರಾಹುಲ್ ಗಾಂಧಿ ವಿರುದ್ಧ ಹೇಳಿಕೆ: ದಿಗ್ವಿಜಯ್ ಸಿಂಗ್ ಅವರ ಸಹೋದರನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್

ಲಕ್ಷ್ಮಣ್ ಸಿಂಗ್ (Photo credit: newstak.in)
ಹೊಸದಿಲ್ಲಿ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ, ಬುಧವಾರ ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ರ ಸಹೋದರ ಲಕ್ಷ್ಮಣ್ ಸಿಂಗ್ ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಕಾಂಗ್ರೆಸ್ ಉಚ್ಚಾಟಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ‘ಲಕ್ಷ್ಮಣ್ ಸಿಂಗ್ ರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ತಿಳಿಸಿದೆ.
ಮಾಜಿ ಶಾಸಕ ಹಾಗೂ ಐದು ಬಾರಿಯ ಸಂಸದ ಲಕ್ಷ್ಮಣ್ ಸಿಂಗ್ ಪಕ್ಷದ ನಾಯಕತ್ವದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಎಐಸಿಸಿ ಶಿಸ್ತು ಸಮಿತಿ ಮಾಡಿದ್ದ ಶಿಫಾರಸಿನ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ರಾಬರ್ಟ್ ವಾದ್ರಾ ಹಾಗೂ ರಾಹುಲ್ ಗಾಂಧಿ ಇಬ್ಬರ ಅಪ್ರಬುದ್ಧತೆಯಿಂದ ಕಾಂಗ್ರೆಸ್ ಇನ್ನೆಷ್ಟು ಕಾಲ ತೊಂದರೆ ಅನುಭವಿಸಬೇಕು ಎಂದು ಪ್ರಶ್ನಿಸಿದ್ದ ಲಕ್ಷ್ಮಣ್ ಸಿಂಗ್ ಅವರಿಗೆ ಕಳೆದ ತಿಂಗಳು ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಪಹಲ್ಗಾಮ್ ದಾಳಿಯ ಬೆನ್ನಿಗೇ, “ರಾಹುಲ್ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಇಬ್ಬರೂ ಅಪ್ರಬುದ್ಧರು” ಎಂಬ ಹೇಳಿಕೆ ನೀಡುವ ಮೂಲಕ, ಲಕ್ಷ್ಮಣ್ ಸಿಂಗ್ ಪಕ್ಷದೊಳಗೆ ವ್ಯಾಪಕ ಅಸಮಾಧಾನ ಭುಗಿಲೇಳುವಂತೆ ಮಾಡಿದ್ದರು.
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಎಪ್ರಿಲ್ 24ರಂದು ಶ್ರದ್ದಾಂಜಲಿ ಸಲ್ಲಿಸಿದ್ದ ಲಕ್ಷ್ಮಣ್ ಸಿಂಗ್, “ಅವರಿಬ್ಬರ ಅಪ್ರಬುದ್ಧತೆಯಿಂದಾಗಿ ದೇಶವು ಸಮಸ್ಯೆಗಳನ್ನು ಎದುರಿಸುತ್ತಿದೆ” ಎಂದೂ ರಾಹುಲ್ ಗಾಂಧಿ ಹಾಗೂ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದರು.