ಅಸ್ಸಾಂ| ವಿವಾದಾತ್ಮಕ AI ವೀಡಿಯೊ: ಕಾಂಗ್ರೆಸ್ನಿಂದ ಬಿಜೆಪಿ ವಿರುದ್ಧ ದೂರು

Photo: X/Assam Congress
ಗುವಾಹಟಿ: ಅಸ್ಸಾಂ ಬಿಜೆಪಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ AI ನಿರ್ಮಿತ ವೀಡಿಯೊ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ವೀಡಿಯೊ “ಭಯ ಮತ್ತು ದ್ವೇಷವನ್ನು ಪ್ರಚೋದಿಸಲು ಉದ್ದೇಶಿಸಿದೆ” ಎಂದು ಆರೋಪಿಸಿರುವ ಅಸ್ಸಾಂ ಕಾಂಗ್ರೆಸ್, ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
“ದೂರು ಸ್ವೀಕರಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಇನ್ನೂ ಅಧಿಕೃತ ಎಫ್ಐಆರ್ ದಾಖಲಾಗಿಲ್ಲ” ಎಂದು ಡಿಸಿಪಿ (ಗುವಾಹಟಿ ಪೂರ್ವ) ಮೃಣಾಲ್ ದೇಕಾ ಅವರು ತಿಳಿಸಿದ್ದಾರೆ.
‘ಬಿಜೆಪಿ ಇಲ್ಲದ ಅಸ್ಸಾಂ’ ಎಂಬ ಶೀರ್ಷಿಕೆಯಡಿ ಹಂಚಲ್ಪಟ್ಟ ವೀಡಿಯೊದಲ್ಲಿ, ‘ಗೋಮಾಂಸ ಕಾನೂನುಬದ್ಧಗೊಳಿಸುವುದು’ ಎಂಬ ಫಲಕದ ಪಕ್ಕದಲ್ಲಿ ಟೋಪಿ ಧರಿಸಿದ ವ್ಯಕ್ತಿ ಮಾಂಸ ಕತ್ತರಿಸುವುದು, ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯ್ ಹಾಗೂ ರಾಹುಲ್ ಗಾಂಧಿ ಪಾಕಿಸ್ತಾನದ ಧ್ವಜದ ಮುಂದೆ ನಿಂತಿರುವುದು ಕಂಡು ಬರುತ್ತದೆ.
ವಿಮಾನ ನಿಲ್ದಾಣ, ಟೀ ತೋಟ, ಕ್ರೀಡಾಂಗಣ, ಅಹೋಮ್ ಸಾಮ್ರಾಜ್ಯದ ಸ್ಮಾರಕ ಘರ್ ಮುಂತಾದ ಪ್ರಮುಖ ಸ್ಥಳಗಳಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಮತ್ತು ಟೋಪಿ ಹಾಕಿದ ಪುರುಷರಿರುವುದು, ಗಡಿ ಬೇಲಿ ದಾಟಿ ಬರುತ್ತಿರುವ ದೃಶ್ಯಗಳು ಸೇರಿವೆ.
ವೀಡಿಯೊ ಕೊನೆಯಲ್ಲಿ “ಅಕ್ರಮ ವಲಸಿಗರು”, “90% ಮುಸ್ಲಿಂ ಜನಸಂಖ್ಯೆ” ಎಂಬ ಪಠ್ಯಗಳೊಂದಿಗೆ “ನಿಮ್ಮ ಮತವನ್ನು ಎಚ್ಚರಿಕೆಯಿಂದ ಚಲಾಯಿಸಿ” ಎಂಬ ಸಂದೇಶ ನೀಡಲಾಗಿದೆ.
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಬೆಡಬ್ರತ ಬೋರಾ ಸಲ್ಲಿಸಿದ ದೂರಿನಲ್ಲಿ, “ಈ ವೀಡಿಯೊವು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಉಂಟುಮಾಡುವ ಜೊತೆಗೆ ಕಾಂಗ್ರೆಸ್ ನಾಯಕರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ. ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿರುವ ಈ ಕಟ್ಟುಕಥೆ, ಸಮಾಜದಲ್ಲಿ ವೈಮನಸ್ಸು ಹುಟ್ಟುಹಾಕುವ ಉದ್ದೇಶ ಹೊಂದಿದೆ” ಎಂದು ಉಲ್ಲೇಖಿಸಲಾಗಿದೆ.
ಪ್ರಚೋದನೆ, ಧಾರ್ಮಿಕ ದ್ವೇಷ ಹರಡುವುದು, ಕ್ರಿಮಿನಲ್ ಬೆದರಿಕೆ ಹಾಗೂ ರಾಷ್ಟ್ರೀಯ ಏಕತೆ ವಿರುದ್ಧದ ಹೇಳಿಕೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದು, ವಿವಾದಾತ್ಮಕ ಪೋಸ್ಟ್ ತೆಗೆದುಹಾಕಲು ಎಕ್ಸ್ಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.
ವೀಡಿಯೊಗೆ ದೇಶವ್ಯಾಪಿ ವಿರೋಧ ವ್ಯಕ್ತವಾದರೂ, ಬಿಜೆಪಿ ಇದನ್ನು ಸಮರ್ಥಿಸಿಕೊಂಡಿದೆ. “ಇದು ಅಸ್ಸಾಂನಲ್ಲಿನ ಜನಸಂಖ್ಯಾ ಬದಲಾವಣೆ ಹಾಗೂ ಅಕ್ರಮ ವಲಸೆಯ ನೈಜ ಚಿತ್ರಣ” ಎಂದು ಬಿಜೆಪಿಯು ಪ್ರತಿಕ್ರಿಯಿಸಿದೆ.







