ಭಾರತದ ಆಂತರಿಕ ಶಕ್ತಿ, ಜಾಗತಿಕ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಮೂಲಕ ಕಾಂಗ್ರೆಸ್ ಪಕ್ಷವು ಚೀನಾಗೆ ನೆರವು ನೀಡಿದೆ: ಬಿಜೆಪಿಯಿಂದ ಗಂಭೀರ ಆರೋಪ

ಜೈರಾಮ್ ರಮೇಶ್ , ಅಮಿತ್ ಮಾಳವೀಯ | PTI
ಹೊಸದಿಲ್ಲಿ: ಕಾಂಗ್ರೆಸ್ ಮಾಡಿದ ಪ್ರಚಾರದಿಂದಾಗಿ ಚೀನಾದೆದುರಿನ ಭಾರತದ ಸ್ಥಾನ ದುರ್ಬಲಗೊಂಡಿತು ಎಂದು ಶುಕ್ರವಾರ ಆರೋಪಿಸಿರುವ ಬಿಜೆಪಿ, ನೆರೆಯ ದೇಶವಾದ ಚೀನಾ ಒಡ್ಡಿದ ಸವಾಲುಗಳನ್ನು ಮೋದಿ ಸರಕಾರ ನಿಭಾಯಿಸಿದ ರೀತಿಯನ್ನು ಟೀಕಿಸಿದ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
“ಒಂದು ವೇಳೆ ಚೀನಾ ಪಾಕಿಸ್ತಾನವನ್ನು ಸಶಸ್ತ್ರಗೊಳಿಸಿ, ತನ್ನ ಸೇನಾ ಹಾರ್ಡ್ ವೇರ್ ಗಳ ಪ್ರಯೋಗಕ್ಕೆ ಅದನ್ನು ಪ್ರಯೋಗ ಮೈದಾನವಾಗಿ ಬಳಸಿಕೊಳ್ಳುತ್ತಿದ್ದರೆ, ಅದು ಗಂಭೀರ ಪ್ರಶ್ನೆದಯನ್ನು ಎತ್ತುತ್ತದೆ. ಆದರೆ, ಚೀನಾದೆದುರು ಭಾರತದ ಸ್ಥಾನವನ್ನು ದುರ್ಬಲಗೊಳಿಸುವಂಥ ಪ್ರಚಾರವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿದ್ದೇಕೆ?” ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.
ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಚಾಲನೆ ನೀಡಿದ ನಂತರ, ಚೀನಾ ದೇಶವು ಪಾಕಿಸ್ತಾನಕ್ಕೆ ಅಗತ್ಯವಿರುವ ಎಲ್ಲ ನೆರವುಗಳನ್ನೂ ನೀಡಿತು ಎಂದು ಓರ್ವ ಉನ್ನತ ಸೇನಾಧಿಕಾರಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನಂತರ, ಅಮಿತ್ ಮಾಳವೀಯಾರಿಂದ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.
ನೆರೆಯ ಚೀನಾ ದೇಶವು ಭಾರತಕ್ಕೆ ನೇರವಾಗಿ ಹಾಗೂ ಪಾಕಿಸ್ತಾನದ ಮೂಲಕ ಒಡ್ಡುತ್ತಿರುವ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಸವಾಲುಗಳ ವಿರುದ್ಧ ಸಾಮೂಹಿಕ ಪ್ರತಿಕ್ರಿಯೆನ್ನು ಹುಟ್ಟು ಹಾಕಲು ಸಂಸತ್ತಿನಲ್ಲಿ ಭಾರತ-ಚೀನಾ ಸಂಬಂಧಗಳ ಕುರಿತು ಚರ್ಚೆ ನಡೆಸಿ, ಸರ್ವಾನುಮತ ಮೂಡಿಸಬಹುದಾಗಿದೆ ಎಂದು ಜೈರಾಮ್ ರಮೇಶ್ ಸಲಹೆ ನೀಡಿದ್ದರು.







