ಪ್ರಧಾನಿ ಮೋದಿ ‘ಆಧುನಿಕ ರಾವಣ’ : ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

ಪ್ರಧಾನಿ ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ,ಅ.3: ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನೊಂದಿಗೆ ಹೋಲಿಸುವುದರೊಂದಿಗೆ ಪಕ್ಷವು ಹೊಸ ವಿವಾದದಲ್ಲಿ ಸಿಲುಕಿದೆ. ಉದಿತ್ ರಾಜ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉದಿತ್ ರಾಜ್, ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತವಾಗಿದ್ದಾರೆ. ಅವರು ಹೇಗೆ ತನ್ನ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆಂದರೆ ಒಮ್ಮೆ ಅವರು ಅದನ್ನು ಪ್ರವೇಶಿಸಿದರೆ ಅದು ಸುಟ್ಟು ಹೋಗುವುದನ್ನು ನೋಡಲಿದ್ದಾರೆ ಎಂದು ಹೇಳಿದರು.
ಉದಿತ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಓರ್ವ ವ್ಯಕ್ತಿಯ ಮೇಲಿನ ದ್ವೇಷದಲ್ಲಿ ಕಾಂಗ್ರೆಸ್ ಸಾಂವಿಧಾನಿಕ ಹುದ್ದೆಗಳ ಘನತೆಯನ್ನು ಮರೆತುಬಿಡುತ್ತದೆ ಎಂದು ಕುಟುಕಿದೆ. ಪ್ರತಿಪಕ್ಷ ನಾಯಕರು ಹಲವಾರು ಸಲ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದೆ.
ಮೋದಿ ವಿರೋಧಿ ಮತ್ತು ಭಾರತ ವಿರೋಧಿಯಾಗಿರುವುದು ಅವರ ಪ್ರಮಾಣಿತ ಕಾರ್ಯಾಚರಣೆ ವಿಧಾನವಾಗಿದೆ ಎಂದು ಹೇಳಿದ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಉದಿತ್ ರಾಜ್ರನ್ನು ಈ ಹಿಂದೆ ಮಾವೋವಾದಿಗಳನ್ನು ಸಮರ್ಥಿಸಿಕೊಂಡಿದ್ದ ಮತ್ತು ಆರೆಸ್ಸೆಸ್ನ್ನು ಭಯೋತ್ಪಾದಕರು ಎಂದು ಕರೆದಿದ್ದ ನಾಯಕ ಎಂದು ಟೀಕಿಸಿದರು.
ಪ್ರಧಾನಿಯವರ ತಾಯಿಯನ್ನು ಪ್ರತಿಪಕ್ಷ ನಾಯಕರು ಅವಮಾನಿಸಿದ್ದರೆನ್ನಲಾದ ನಿದರ್ಶನಗಳನ್ನು ಎತ್ತಿ ತೋರಿಸಿದ ಅವರು, ಇದು ಕಾಂಗ್ರೆಸ್ನ ನಿಜರೂಪವಾಗಿದೆ. ಒಂದೆಡೆ ಮೋದಿಯವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸ್ವಸ್ಥರಾದಾಗ ಅವರ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಇದು ಆರೆಸ್ಸೆಸ್ನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಇನ್ನೊಂದೆಡೆ ರಾಹುಲ್ ಗಾಂಧಿಯವರು ಪ್ರಧಾನಿಯವರನ್ನು ಬಡಿಗೆಗಳಿಂದ ಥಳಿಸುವ ಕುರಿತು ಮಾತನಾಡುತ್ತಾರೆ. ಅವರು ಮೋದಿಯವರ ಒಬಿಸಿ ಸಮುದಾಯವನ್ನು ನಿಂದಿಸುತ್ತಾರೆ ಎಂದು ಹೇಳಿದರು.
ಇದು ಅವರು ಮೊಹಬ್ಬತ್ ಕಿ ದುಕಾನ್(ಪ್ರೀತಿಯ ಅಂಗಡಿ)’ ಅಲ್ಲ,‘ನಫ್ರತ್ ಕಿ ಭಾಯಿಜಾನ್(ದ್ವೇಷದ ಸೋದರ)’ ಆಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇದಕ್ಕಾಗಿಯೇ ಅವರು ಆಗಾಗ್ಗೆ ಚುನಾವಣಾ ಆಯೋಗ, ಭಾರತ ಮತ್ತು ಸನಾತನ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ ಎಂದು ಪೂನಾವಾಲಾ ಹೇಳಿದರು.







