ಸಿಕ್ಖರ ಹತ್ಯೆ ಪ್ರಕರಣದಿಂದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್, ಇತರ ಆರೋಪಿಗಳ ಖುಲಾಸೆ
1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣ
ಸಜ್ಜನ್ ಕುಮಾರ್ | Photo: PTI
ಹೊಸದಿಲ್ಲಿ: ಸುಲ್ತಾನ್ಪುರಿ ಪ್ರದೇಶದಲ್ಲಿ 1984ರಲ್ಲಿ ನಡೆದ ಸಿಕ್ಖ್ ವಿರೋಧಿ ಗಲಭೆಗೆ ಸಂಬಂಧಿಸಿ ಹತ್ಯೆ ಪ್ರಕರಣದಲ್ಲಿ ಲೋಕಸಭೆಯ ಮಾಜಿ ಸದಸ್ಯ, ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್ ಅವರು ವೇದ್ಪ್ರಕಾಶ್ ಹಾಗೂ ಬ್ರಹ್ಮಾನಂದ ಗುಪ್ತ ಅವರನ್ನು ಕೂಡ ಖುಲಾಸೆಗೊಳಿಸಿದ್ದಾರೆ.
ಸಜ್ಜನ್ ಕುಮಾರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಈ ಪ್ರಕರಣ ದಾಖಲಿಸಲಾಗಿತ್ತು. ಆದರೆ, ವಿಚಾರಣೆ ಸಂದರ್ಭ ಇಬ್ಬರು ಆರೋಪಿಗಳು ಮೃತಪಟ್ಟಿದ್ದರು. ಸಿಕ್ಖ್ ವಿರೋಧಿ ಗಲಭೆಗೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ‘ಪ್ರಮುಖ ಪ್ರಚೋದಕ’ ಎಂದು ಕಳೆದ ತಿಂಗಳು ನ್ಯಾಯಾಲಯ ಸ್ಪಷ್ಟವಾಗಿ ಗುರುತಿಸಿತ್ತು. ಸಜ್ಜನ್ ಕುಮಾರ್ ಅವರು 1984 ನವೆಂಬರ್ 1ರಂದು ದಿಲ್ಲಿಯ ನವಾಡಾ ಪ್ರದೇಶದ ಗುಲಾಬ್ ಬಾಗ್ ನಲ್ಲಿರುವ ಗುರುದ್ವಾರಕ್ಕೆ ಬೆಂಕಿ ಹಚ್ಚುವ ಸ್ಪಷ್ಟ ಉದ್ದೇಶ ಹೊಂದಿದ್ದ ಗುಂಪಿನ ಭಾಗವಾಗಿದ್ದರು ಎಂದು ನ್ಯಾಯಾಲಯ ಹೇಳಿತ್ತು. ಈ ಪ್ರದೇಶದಲ್ಲಿರುವ ಸಿಕ್ಖರ ಮನೆಗಳಿಗೆ ಬೆಂಕಿ ಹಚ್ಚಲು ಕೂಡ ಈ ಗುಂಪು ಬಯಸಿತ್ತು. ಸಜ್ಜನ್ ಕುಮಾರ್ ಗುಂಪಿನಲ್ಲಿದ್ದ ಇತರರಿಗೆ ಪ್ರಚೋದನೆ ನೀಡಿದ್ದರು ಎಂದು ನ್ಯಾಯಾಲಯ ಹೇಳಿತ್ತು.
ಸುಲ್ತಾನ್ಪುರಿಯಲ್ಲಿ ಸಿಕ್ಖ್ ಗಲಭೆ ಸಂದರ್ಭ ಆರು ಮಂದಿಯನ್ನು ಹತ್ಯೆಗೈದಿರುವುದಕ್ಕೆ ಸಂಬಂಧಿಸಿ ಸಜ್ಜನ್ ಕುಮಾರ್, ಬ್ರಹ್ಮಾನಂದ, ಪೆರು, ಕುಶಾಲ್ ಸಿಂಗ್ ಹಾಗೂ ವೇದ್ ಪ್ರಕಾಶ್ ವಿರುದ್ಧ ಕಾಕೋರ್ಡೂಮಾ ನ್ಯಾಯಾಲಯ 2010 ಜುಲೈಯಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಈ ನಡುವೆ ಇದೇ ಪ್ರಕರಣಕ್ಕೆ ಸಂಬಂದಿಸಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರ ವಿಚಾರಣೆಯನ್ನು ರೋಸ್ ಅವೆನ್ಯೂ ನ್ಯಾಯಾಲಯ ಅಕ್ಟೋಬರ್ 13ಕ್ಕೆ ಮುಂದೂಡಿದೆ.