Kerala | ಪಂಚಾಯತಿಯ ಅಧಿಕಾರಕ್ಕೆ ಬಿಜೆಪಿಯೊಂದಿಗೆ ಮೈತ್ರಿ; ಪಕ್ಷವನ್ನೇ ತೊರೆದ ಕಾಂಗ್ರೆಸ್ ನಾಯಕರು!

Photo Credit : NDTV
ತ್ರಿಶೂರ್ (ತಿರುವನಂತಪುರಂ): ಪಂಚಾಯತಿಯನ್ನು ನಿಯಂತ್ರಣಕ್ಕೆ ಪಡೆಯಲು ಕಾಂಗ್ರೆಸ್ ಪಕ್ಷದ ಎಂಟು ಮಂದಿ ಚುನಾಯಿತ ಸದಸ್ಯರು ತಮ್ಮ ಮಾತೃಪಕ್ಷಕ್ಕೇ ರಾಜೀನಾಮೆ ಸಲ್ಲಿಸಿ, ಬಿಜೆಪಿಗೆ ಸೇರ್ಪಡೆಯಾಗಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಮತ್ತತೂರ್ ಪಂಚಾಯತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಿಜೆಪಿಯ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಬಂಡಾಯ ಸದಸ್ಯ ಟೆಸ್ಸಿ ಜೋಸ್ ಕಲ್ಲರಾಯ್ ಕ್ಕಲ್ ಮತ್ತತೂರ್ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ ನೇತೃತ್ವದಲ್ಲಿ ನೂತನ ಮೈತ್ರಿಕೂಟವನ್ನು ರಚಿಸಿರುವ ಅವರು, 23 ವರ್ಷಗಳ ಎಡರಂಗ ಮೈತ್ರಿಕೂಟದ ಅಧಿಕಾರವನ್ನು ಅಂತ್ಯಗೊಳಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ 24 ಸದಸ್ಯ ಬಲದ ಮತ್ತತೂರ್ ಪಂಚಾಯತಿ ಚುನಾವಣೆಯ ಫಲಿತಾಂಶ ಅತಂತ್ರವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಎಂಟು ಸ್ಥಾನಗಳಲ್ಲಿ, ಎಡಪಕ್ಷಗಳ ಮೈತ್ರಿಕೂಟವಾದ ಎಲ್ಡಿಎಫ್ 10 ಸ್ಥಾನಗಳಲ್ಲಿ, NDA ಮೈತ್ರಿಕೂಟ 4 ಸ್ಥಾನಗಳಲ್ಲಿ ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ವಿಜೇತರಾಗಿದ್ದರು. ಯುಡಿಎಫ್ ಹಾಗೂ ಎಲ್ಡಿಎಫ್ ಮೈತ್ರಿಕೂಟಗಳು ಬಹುತೇಕ ಸಮಬಲವಾಗಿದ್ದರಿಂದ, ಅಧ್ಯಕ್ಷರ ಆಯ್ಕೆಗೆ ನಿಕಟ ಪೈಪೋಟಿ ಏರ್ಪಟ್ಟಿತ್ತು.
ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೆ.ಆರ್.ಔಸೆಫ್ ಅವರನ್ನು ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಎಲ್ಡಿಎಫ್ ನೊಂದಿಗೆ ಕೈಜೋಡಿಸಿದ್ದ ಔಸೆಫ್, ಕಾಂಗ್ರೆಸ್ ನಾಯಕರಿಗೆ ಆಘಾತವನ್ನುಂಟು ಮಾಡಿದ್ದರು.
ಇದರಿಂದ ಕುಪಿತರಾದ ಎಲ್ಲ ಎಂಟು ಮಂದಿ ಕಾಂಗ್ರೆಸ್ ಸದಸ್ಯರು ಮಾತೃಪಕ್ಷವನ್ನೇ ತೊರೆದಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕತ್ವು ಅನ್ಯಾಯಯುತವಾಗಿ ವರ್ತಿಸಿದ್ದು, ನಿಷ್ಠಾವಂತ ಮತದಾರರನ್ನು ನಿರ್ಲಕ್ಷಿಸಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದರು. ಅವರೆಲ್ಲ ಮಾತೃಪಕ್ಷವನ್ನು ತೊರೆದ ನಂತರ, ಟೆಸ್ಸಿ ಜೋಸ್ ಯನ್ನು ಸ್ವತಂತ್ರ ಅಭ್ಯರ್ಥಿಯನ್ನಾಗಿ ಬೆಂಬಲಿಸಲು ನಿರ್ಧರಿಸಿದ್ದಾರೆ. ಆಕೆಗೆ ಮೂವರು ಬಿಜೆಪಿ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದ್ದಾರೆ (ಒಂದು ಬಿಜೆಪಿ ಮತ ಅಮಾನ್ಯಗೊಂಡಿದೆ). ಕೊನೆಗೆ ಅವರು 12 ಸದಸ್ಯರ ಬೆಂಬಲದೊಂದಿಗೆ ಪಂಚಾಯತಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಸದಸ್ಯರನ್ನು ಮಿನಿಮೋಲ್, ಶ್ರೀಜಾ, ಸುಮಾ ಆ್ಯಂಟನಿ, ಅಕ್ಷಯ್ ಸಂತೋಷ್, ಪ್ರಿಂಟೊ ಪಲ್ಲಿಪರಂಬನ್, ಸಿ.ಜಿ.ರಾಜೇಶ್, ಸಿ.ಬಿ.ಪೌಲೋಸ್ ಹಾಗೂ ನೂರ್ ಜಹಾನ್ ನವಾಝ್ ಎಂದು ಗುರುತಿಸಲಾಗಿದೆ.
ಈ ಬೆಳವಣಿಗೆಯಿಂದ ಕಾಂಗ್ರೆಸ್ ಹಾಗೂ ಎಡಪಕ್ಷಗಳೆರಡಕ್ಕೂ ಆಘಾತವಾಗಿದ್ದು, ಬಿಜೆಪಿಯ ಬೆಂಬಲದೊಂದಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಯಾರೂ ನಿರೀಕ್ಷಿಸಿರದ ನೂತನ ರಾಜಕೀಯ ಮೈತ್ರಿಗೆ ಜನ್ಮ ನೀಡಿದೆ.







