ಜವಾಹರ್ ಲಾಲ್ ನೆಹರೂ ಬಗ್ಗೆ ಟೀಕೆ : ಮೋದಿ, ಶಾಗೆ ಕಾಂಗ್ರೆಸ್ ತರಾಟೆ

Photo Credit: PTI
ಹೊಸದಿಲ್ಲಿ, ಜು. 30: ಲೋಕಭೆಯಲ್ಲಿ ಪಹಾಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರದ ಕುರಿತ ಚರ್ಚೆಯ ಸಂದರ್ಭ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಅವರ(ಕೇಂದ್ರ ಸರಕಾರ) ಪ್ರಸಕ್ತ ವೈಫಲ್ಯಗಳಿಗೆ ಅವರಲ್ಲಿ ಉತ್ತರವಿಲ್ಲ. ಆದುದರಿಂದ ಅವರು ಗಮನವನ್ನು ಬೇರೆಡೆಗೆ ಸೆಳೆಯುವ, ಸತ್ಯವನ್ನು ತಿರುಚುವ ಹಾಗೂ ಮಾನಹಾನಿ ಮಾಡುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
‘‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಲೋಕಸಭೆಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಬಗ್ಗೆ ಮಾತನಾಡಿದ್ದು ನೋಡಿದರೆ, ಅವರು ವೈದ್ಯಕೀಯ ಭಾಷೆಯಲ್ಲಿ ಕರೆಯುವ ಒಸಿಡಿ (ಒಬೆಸ್ಸಿವ್-ಕಂಪಲ್ಸಿವ್ ಡಿಸಾರ್ಡರ್) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಂಬುದನ್ನು ತೋರಿಸುತ್ತದೆ’’ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಹೇಳಿದ್ದಾರೆ.
‘‘ಅವರ ಪ್ರಸಕ್ತ ವೈಫಲ್ಯದ ಬಗ್ಗೆ ಅವರಲ್ಲಿ ಉತ್ತರವಿಲ್ಲ. ಅವರ ನೀತಿಗಳು ಹಾಗೂ ಕಾರ್ಯಗಳ ಕುರಿತು ಎತ್ತಲಾಗುತ್ತಿರುವ ನ್ಯಾಯಬದ್ಧ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಅವರು ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಬದಲು, ಗಮನ ಬೇರೆಡೆ ಸೆಳೆಯುತ್ತಾರೆ, ಸತ್ಯವನ್ನು ತಿರುಚುತ್ತಾರೆ ಹಾಗೂ ಮಾನ ಹಾನಿ ಉಂಟು ಮಾಡುತ್ತಾರೆ’’ ಎಂದು ಅವರು ಹೇಳಿದ್ದಾರೆ.
‘‘ಗೃಹ ಸಚಿವರು ತಾನು ಒಂದು ರೀತಿಯ ಇತಿಹಾಸಕಾರನೆಂದು ಪ್ರತಿಪಾದಿಸಿದ್ದಾರೆ. ಆದರೆ ಅವರೊಬ್ಬ ಅತಿದೊಡ್ಡ ಇತಿಹಾಸವನ್ನು ತಿರುಚುವ ವ್ಯಕ್ತಿ. ಇದರಲ್ಲಿ ಮೊದಲನೇ ಸ್ಥಾನವನ್ನು ಸಮಗ್ರ ರಾಜಕೀಯ ಪರಿಣತರಿಗೆ ಮೀಸಲಿರಿಸಲಾಗಿದೆ’’ ಎಂದು ರಮೇಶ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಪಹಾಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರದ ಚರ್ಚೆಯ ಸಂದರ್ಭ ಮಾತನಾಡಿದ ಮೋದಿ ಅವರು ಕಾಂಗ್ರೆಸ್ ಸರಕಾರ ಜವಾಹರ್ ಲಾಲ್ ನೆಹರೂ ಅವರ ನೇತೃತ್ವದಲ್ಲಿ ಇದ್ದಾಗ ಅಕಾಯಿ ಚಿನ್ನ 38,000 ಕಿ.ಮೀ. ಭೂಭಾಗವನ್ನು ಕಳೆದುಕೊಂಡಿತ್ತು ಎಂದು ಹೇಳಿದ್ದರು.







