ಬಿಹಾರ ಕರಡು ಮತದಾರರ ಪಟ್ಟಿ | ಪ್ರತಿಪಕ್ಷಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅಧಿಕ ಮತದಾರರನ್ನು ಕೈಬಿಡಲಾಗಿದೆ: ಮಾಣಿಕಂ ಟಾಗೋರ್
ಸಂಸತ್ತಿನಲ್ಲಿ ಬಿಹಾರ ಎಸ್ ಐ ಆರ್ ಕುರಿತು ಚರ್ಚೆಗೆ ಆಗ್ರಹ

ಮಾಣಿಕಂ ಟಾಗೋರ್ (File Photo/ANI)
ಹೊಸದಿಲ್ಲಿ,ಆ.3: ಬಿಹಾರದಲ್ಲಿ ಮತದಾರರ ಕರಡು ಪಟ್ಟಿಯಿಂದ ಹೊರಗುಳಿದಿರುವ ಮತದಾರರ ಸಂಖ್ಯೆಯು ಪ್ರತಿಪಕ್ಷಗಳ ಭದ್ರಕೋಟೆಗಳೆಂದು ಪರಿಗಣಿಸಲಾಗಿರುವ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ ಎಂದು ರವಿವಾರ ಆರೋಪಿಸಿದ ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಅವರು, ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿದರು.
ಗೋಪಾಲಗಂಜ್ ನಲ್ಲಿ ಶೇ.15.10,ಪುರ್ನಿಯಾದಲ್ಲಿ ಶೇ.12.07,ಕಿಶನಗಂಜ್ ನಲ್ಲಿ ಶೇ.11.82, ಮಧುಬನಿಯಲ್ಲಿ ಶೇ.10.44 ಮತ್ತು ಭಾಗಲ್ಪುರದಲ್ಲಿ ಶೇ.10.19ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಗಳಿಂದ ಅಳಿಸಲಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿರುವ ಟಾಗೋರ್, 2025ರ ವಿಧಾನಸಭಾ ಚುನಾವಣೆಗೆ ಮುನ್ನ 65 ಲಕ್ಷ ಮತದಾರರು ಅಥವಾ ಒಟ್ಟು ಮತದಾರರ ಪೈಕಿ ಶೇ.8.3ರಷ್ಟು ಜನರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಪ್ರತಿಪಕ್ಷಗಳ ಭದ್ರಕೋಟೆಯೆಂದು ಪರಿಗಣಿಸಲಾಗಿರುವ ಜಿಲ್ಲೆಗಳಲ್ಲಿ ಇಂತಹ ಮತದಾರರ ಸಂಖ್ಯೆ ಅಸಮಾನವಾಗಿ ಹೆಚ್ಚಾಗಿದೆ ಎಂದು ಬೆಟ್ಟು ಮಾಡಿದ್ದಾರೆ. ದುರ್ಬಲ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಮತದಾರರ ಹೆಸರುಗಳ ಅಳಿಸುವಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹೆಚ್ಚಿನ ಈ ಪ್ರದೇಶಗಳಲ್ಲಿ ದಲಿತರು,ಮುಸ್ಲಿಮರು,ವಲಸಿಗರು ಮತ್ತು ನಗರ ಬಡವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಪರಿಶೀಲನೆಯ ಹೆಸರಿನಲ್ಲಿ ಅವರನ್ನೇ ಪ್ರಮುಖ ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ಅವರು ಕಿಡಿ ಕಾರಿದ್ದಾರೆ.
ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ ಅವರ ಹೆಸರೂ ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದು, ಅದೊಂದು ತಾಂತ್ರಿಕ ಸಮಸ್ಯೆಎಂದು ಚುನಾವಣಾ ಆಯೋಗವು ಬಳಿಕ ಸಮಜಾಯಿಷಿ ನೀಡಿದೆ. ಆದರೆ ಲಕ್ಷಾಂತರ ಸಾಮಾನ್ಯ ಮತದಾರರಿಗೆ ತಾವು ಸದ್ದಿಲ್ಲದೆ ತಮ್ಮ ಹಕ್ಕನ್ನು ಕಳೆದುಕೊಳ್ಳಬಹುದು ಎನ್ನುವುದು ತಿಳಿದಿಲ್ಲ. ಇದು ಫಲಿತಾಂಶಗಳನ್ನು ಬದಲಿಸಬಹುದು. ಕಳೆದ ಚುನಾವಣೆಗಳಲ್ಲಿ ಬಿಹಾರದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ಅಂತರ 10,000 ಮತಗಳಿಗೂ ಕಡಿಮೆಯಿತ್ತು ಎಂದು ಟಾಗೋರ್ ತನ್ನ ಎಕ್ಸ್ ಪೋಸ್ಟ್ ನಲ್ಲಿ ಎತ್ತಿ ತೋರಿಸಿದ್ದಾರೆ.
ಸಂಸತ್ತಿನಲ್ಲಿ ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿರುವ ಅವರು, ನೀವು ಶೇ.10-15ರಷ್ಟು ಇಂಡಿಯಾ ಮೈತ್ರಿಕೂಟದ ಮತದಾರರ ಹೆಸರುಗಳನ್ನು ಅಳಿಸಿದರೆ ಆಗಲೂ ಅದು ನ್ಯಾಯಯುತ ಚುನಾವಣೆ ಆಗುತ್ತದೆಯೇ? ಇದೇ ಕಾರಣದಿಂದ ಸಂಸತ್ತಿನಲ್ಲಿ ಚರ್ಚೆಗೆ ಪ್ರತಿಪಕ್ಷ ಸಂಸದರು ಆಗ್ರಹಿಸುತ್ತಿದ್ದಾರೆ. ಏಕೆಂದರೆ ಇಂದು ಅದು ಬಿಹಾರವಾಗಿದೆ. ನಾಳೆ ಅಸ್ಸಾಂ ಮತ್ತು ಪ.ಬಂಗಾಳವಾಗಲಿದೆ. ಇಂಡಿಯಾ ಪಕ್ಷಗಳ ಶೇ.10ರಿಂದ ಶೇ.15ರಷ್ಟು ಮತದಾರರ ಹೆಸರುಗಳನ್ನು ಅಳಿಸುವ ರಾಷ್ಟ್ರವ್ಯಾಪಿ ಮಾದರಿಯು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದೂ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.







