ನಾನು ಪಕ್ಷದ ನಿಲುವಿನಿಂದ ಹಿಂದೆ ಸರಿದಿಲ್ಲ: ಕಾಂಗ್ರೆಸ್ ಸಂಸದ ಶಶಿ ತರೂರ್

ಶಶಿ ತರೂರ್ (Photo: PTI)
ಹೊಸದಿಲ್ಲಿ: ತಮ್ಮ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿಂದಲೇ ಟೀಕೆಗಳು ವ್ಯಕ್ತವಾದರೂ, ಪಕ್ಷದ ನಿಲುವಿನಿಂದ ತಾವು ಎಂದಿಗೂ ದೂರ ಸರಿದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಪ್ರಿಲ್ ನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ‘ಲಕ್ಷ್ಯ 2026’ ನಾಯಕತ್ವ ಶಿಬಿರದಲ್ಲಿ ಭಾಗವಹಿಸಿದ ಬಳಿಕ ತರೂರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ನಾನು ಪಕ್ಷದ ರೇಖೆಯನ್ನು ದಾಟಿದ್ದೇನೆ ಎಂದು ಯಾರು ಹೇಳಿದರು ಎಂಬುದೇ ನನ್ನ ಪ್ರಶ್ನೆ. ವಿವಿಧ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಬಹುತೇಕ ಎಲ್ಲ ವಿಚಾರಗಳಲ್ಲೂ ಪಕ್ಷದ ನಿಲುವು ಮತ್ತು ನನ್ನ ನಿಲುವು ಒಂದೇ ರೇಖೆಯಲ್ಲಿದೆ,” ಎಂದು ಅವರು ಹೇಳಿದರು.
ನ. 8ರಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ತರೂರ್ ಹೊಗಳಿದ್ದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕತ್ವದೊಂದಿಗೆ ಅವರ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹಗಳು ಹರಡಿದ್ದವು.
ಅಡ್ವಾಣಿಯವರ ಕುರಿತು ತಾವು ವ್ಯಕ್ತಪಡಿಸಿದ ಪ್ರಶಂಸೆ ಚರ್ಚೆಗೆ ಕಾರಣವಾದ ನಂತರ, “ದೀರ್ಘ ಸಾರ್ವಜನಿಕ ಸೇವೆಯನ್ನು—ಅದು ಎಷ್ಟೇ ಮಹತ್ವದ್ದಾಗಿದ್ದರೂ—ಒಂದು ಘಟನಾಕ್ರಮಕ್ಕೆ ಸೀಮಿತಗೊಳಿಸುವುದು ಅನ್ಯಾಯ,” ಎಂದು ತರೂರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆ ವೇಳೆ ಕಾಂಗ್ರೆಸ್ ಪಕ್ಷವು ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿತ್ತು. ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿದ ತರೂರ್, “ನಮ್ಮ ಸಂಸ್ಕೃತಿ ಹಿರಿಯರನ್ನು ಗೌರವಿಸಲು ಕಲಿಸುತ್ತದೆ. ನಾನು ಅದನ್ನೇ ಮಾಡಿದೆ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ನವೆಂಬರ್ 18ರಂದು ಹೊಸದಿಲ್ಲಿಯಲ್ಲಿ ನಡೆದ ರಾಮನಾಥ್ ಗೋಯೆಂಕಾ ಸ್ಮಾರಕ ಉಪನ್ಯಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಕುರಿತು ತಾವು ನೀಡಿದ್ದ ಪ್ರತಿಕ್ರಿಯೆಯ ಮೇಲೂ ತರೂರ್ ಸ್ಪಷ್ಟನೆ ನೀಡಿದರು.
ಸೋಮವಾರ ತರೂರ್, ತಾವು ಕಾರ್ಯಕ್ರಮದಲ್ಲಿ ಮೋದಿ ಕುರಿತು ಹೇಳಿದ್ದನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದರು. “ನಾನು ಅವರನ್ನು ಹೊಗಳಿದ್ದ ಸ್ಥಳವನ್ನು ತೋರಿಸಲು ಜನರನ್ನು ಕೇಳಿದೆ. ಸಂಪೂರ್ಣ ಪೋಸ್ಟ್ ಓದಿದರೆ ಅಂಥದ್ದೇನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಅವರು ಹೇಳಿದರು. ಮಾಧ್ಯಮ ವರದಿಗಳು ಪೂರ್ಣ ಪಠ್ಯ ಓದದೆ ಕೇವಲ ಮುಖ್ಯಾಂಶಗಳ ಆಧಾರದಲ್ಲಿ ಬಂದಾಗ ವಿವಾದಗಳು ಹೆಚ್ಚಾಗುತ್ತವೆ ಎಂದೂ ಅವರು ಅಭಿಪ್ರಾಯಪಟ್ಟರು.
ತಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದು, ಪಕ್ಷದ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ತರೂರ್ ಹೇಳಿದರು. “ಈಗ ಯಾವುದೇ ತಪ್ಪು ತಿಳುವಳಿಕೆಯ ಅಗತ್ಯವಿಲ್ಲ,” ಎಂದರು.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ ಬಳಿಕ ಸಂಬಂಧಗಳು ಹದಗೆಟ್ಟವು ಎಂಬ ಊಹಾಪೋಹಗಳ ಕುರಿತು ಕೇಳಿದ ಪ್ರಶ್ನೆಗೆ, ಆಂತರಿಕ ಚುನಾವಣೆಗಳು ಪಕ್ಷದ ಪ್ರಜಾಪ್ರಭುತ್ವ ಸಂಪ್ರದಾಯಗಳ ಭಾಗವಾಗಿದೆ ಎಂದು ಅವರು ಉತ್ತರಿಸಿದರು.







