ದಿಲ್ಲಿಯಲ್ಲಿ ವಾಕಿಂಗ್ ವೇಳೆ ಕಾಂಗ್ರೆಸ್ ಸಂಸದೆಯ ಚಿನ್ನದ ಸರ ಕಳವು

ಸುಧಾ ರಾಮಕೃಷ್ಣನ್ (Photo credit: NDTV)
ಹೊಸದಿಲ್ಲಿ: ದಿಲ್ಲಿಯಲ್ಲಿ ಬೆಳಗ್ಗೆ ವಾಕಿಂಗ್ (ವಾಯುವಿಹಾರ) ಓರ್ವ ನನ್ನ ಸರವನ್ನು ಕಸಿದು ಪರಾರಿಯಾಗಿದ್ದಾನೆ ಎಂದು ಸೋಮವಾರ ಕಾಂಗ್ರೆಸ್ ಸಂಸದೆ ಸುಧಾ ರಾಮಕೃಷ್ಣನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಚಾಣಕ್ಯಪುರಿಯ ರಾಜತಾಂತ್ರಿಕ ಸಂಕೀರ್ಣದಲ್ಲಿರುವ ಪಾಲಿಶ್ ಎಂಬಸಿಯಲ್ಲಿ ನಾನು ನನ್ನ ಸಹೋದ್ಯೋಗಿ ಡಿಎಂಕೆ ಸಂಸದೆ ರಜತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಮಿಳುನಾಡಿನ ಮಯಿಲ್ ದುತುರೈ ಲೋಕಸಭಾ ಕ್ಷೇತ್ರದ ಸಂಸದೆಯಾದ ಸುಧಾ ರಾಮಕೃಷ್ಣನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ದಿಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಮೇಲುಸ್ತುವಾರಿಯನ್ನೂ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆದಿರುವ ಅವರು, ಸಂಪೂರ್ಣವಾಗಿ ಮುಚ್ಚುವಂತಹ ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿ ನನ್ನ ಸರ ಅಪಹರಿಸಿದ್ದಾನೆ ಎಂದು ತಿಳಿಸಿದ್ದಾರೆ.
"ನಾವು ಬೆಳಗ್ಗೆ ಸುಮಾರು 6.15ರಿಂದ 6.20ರ ನಡುವೆ ಪೊಲ್ಯಾಂಡ್ ದ್ವಾರ-3 ಹಾಗೂ 4ರ ಬಳಿ ಇದ್ದಾಗ, ಸ್ಕೂಟಿಯಲ್ಲಿ ನಮ್ಮ ವಿರುದ್ಧ ದಿಕ್ಕಿನಿಂದ ಬಂದ ವ್ಯಕ್ತಿ ನನ್ನ ಸರವನ್ನು ಕಸಿದು ಪರಾರಿಯಾದ" ಎಂದು ಅವರು ತಮ್ಮ ಪತ್ರದಲ್ಲಿ ದೂರಿದ್ದಾರೆ.
"ಈ ವೇಳೆ ನನ್ನ ಕುತ್ತಿಗೆಗೆ ಗಾಯವಾಗಿದ್ದು, ನಾನು ಸುಮಾರು ನಾಲ್ಕು ಸವರನ್ಗಿಂತ ಅಧಿಕ ತೂಕವಿದ್ದ ಸರವನ್ನು ಕಳೆದುಕೊಂಡಿದ್ದೇನೆ" ಎಂದೂ ಅವರು ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.







