‘ಅವರ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು’ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 105ನೇ ಜಯಂತಿ ಸಂದರ್ಭದಲ್ಲಿ ನೆನೆಸಿಕೊಂಡ ಕಾಂಗ್ರೆಸ್

Photo: PTI
ಹೊಸದಿಲ್ಲಿ: ದಿ.ಇಂದಿರಾ ಗಾಂಧಿಯವರ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು ಎಂದು ಕಾಂಗ್ರೆಸ್ ರವಿವಾರ ಮಾಜಿ ಪ್ರಧಾನಿಯ 105ನೇ ಜನ್ಮದಿನದ ಸಂದರ್ಭದಲ್ಲಿ ಹೇಳಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ ಅವರು ಇಲ್ಲಿಯ ಶಕ್ತಿಸ್ಥಳಕ್ಕೆ ತೆರಳಿ ದಿವಂಗತ ನಾಯಕಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.
ಇಂದಿರಾ ಗಾಂಧಿಯವರು ಕುಶಲ ನಾಯಕತ್ವವನ್ನು ಪ್ರದರ್ಶಿಸಿದ್ದರು ಮತ್ತು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು ಎಂದು ಖರ್ಗೆ ತನ್ನ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘ಕ್ಷಮೆಯು ಧೈರ್ಯಶಾಲಿ ಇಂದಿರಾ ಗಾಂಧಿಯವರ ಗುಣವಾಗಿತ್ತು. ಭಾರತದ ಮೊದಲ ಮಹಿಳಾ ಪ್ರಧಾನಿ ಮತ್ತು ನಮ್ಮ ಆದರ್ಶ ಇಂದಿರಾ ಗಾಂಧಿಯವರಿಗೆ ಜನ್ಮದಿನದಂದು ನಮ್ಮ ವಿನಮ್ರ ನಮನಗಳು ’ಎಂದು ಬರೆದುಕೊಂಡಿರುವ ಖರ್ಗೆ,‘ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ಭಾರತವನ್ನು ಬಲಿಷ್ಠ ಮತ್ತು ಪ್ರಗತಿಪರ ದೇಶವನ್ನಾಗಿಸುವಲ್ಲಿ ಅವರು ಕೌಶಲ್ಯಪೂರ್ಣ ನಾಯಕತ್ವ,ನಿಜವಾದ ನಿಷ್ಠೆ ಮತ್ತು ಬಲವಾದ ಇಚ್ಛಾಶಕ್ತಿಯನ್ನು ನಿರಂತರವಾಗಿ ಪ್ರದರ್ಶಿಸಿದ್ದರು ಮತ್ತು ದೇಶಕ್ಕಾಗಿ ಪ್ರತಿಯೊಂದನ್ನೂ ತ್ಯಾಗ ಮಾಡಿದ್ದರು . ಅವರ ಜೀವನ ದೇಶಕ್ಕೆ ಸಮರ್ಪಿತ ಕರ್ತವ್ಯವಾಗಿತ್ತು ಮತ್ತು ಅವರ ಅದಮ್ಯ ಧೈರ್ಯ ಕೋಟ್ಯಂತರ ಭಾರತೀಯರಿಗೆ ಸದಾ ಸ್ಫೂರ್ತಿಯಾಗಿರಲಿದೆ ’ ಎಂದು ಹೇಳಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರೂ ಮಾಜಿ ಪ್ರಧಾನಿಗೆ ಗೌರವಗಳನ್ನು ಸಲ್ಲಿಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ ದೇಶಕ್ಕೆ ಇಂದಿರಾ ಗಾಂಧಿಯವರ ಕೊಡುಗೆಗಳನ್ನು ಅವರು ಸ್ಮರಿಸಿದ್ದಾರೆ.
1917,ನ.19ರಂದು ಜನಿಸಿದ್ದ ಇಂದಿರಾ ಗಾಂಧಿಯವರು ರಾಷ್ಟ್ರ ರಾಜಕೀಯದಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿದ್ದಾರೆ. ದೇಶದ ಮೂರನೇ ಪ್ರಧಾನಮಂತ್ರಿಯಾಗಿ 1966ರಿಂದ 1977ರವರೆಗೆ ಸೇವೆ ಸಲ್ಲಿಸಿದ್ದ ಅವರು,1980ರಲ್ಲಿ ಮತ್ತೆ ಆ ಹುದ್ದೆಗೇರಿದ್ದರು ಹಾಗೂ 1984,ಅ.31ರಂದು ಹತ್ಯೆಯಾಗುವವರೆಗೂ ಅಧಿಕಾರದಲ್ಲಿದ್ದರು.
ಇಂದಿರಾ ದೇಶದ ಏಕೈಕ ಮಹಿಳಾ ಪ್ರಧಾನಿಯೂ ಹೌದು. ತನ್ನ ತಂದೆ ಹಾಗೂ ಮಾಜಿ ಪ್ರಧಾನಿ ಜವಾಹರಲಾಲ ನೆಹರು ನಂತರ ದೇಶವನ್ನು ಅತ್ಯಂತ ದೀರ್ಘಕಾಲ (ಒಟ್ಟು 15 ವರ್ಷಗಳು ಮತ್ತು 350 ದಿನಗಳು) ಆಳಿದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಯೂ ಅವರದಾಗಿದೆ.







