ವಿಚಾರಣೆಯಿಲ್ಲದೆ ದೀರ್ಘಕಾಲ ಜೈಲಿನಲ್ಲಿಡಲು ಅವಕಾಶ ನೀಡುವ ಕಾನೂನನ್ನು ಕಾಂಗ್ರೆಸ್ ರೂಪಿಸಿದೆ: ಅಸದುದ್ದೀನ್ ಉವೈಸಿ ವಾಗ್ದಾಳಿ

ಅಸದುದ್ದೀನ್ ಉವೈಸಿ (Photo: PTI)
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ವಿಚಾರಣೆಯಿಲ್ಲದೆ ದೀರ್ಘಕಾಲ ಜೈಲಿನಲ್ಲಿಡಲು ಅವಕಾಶ ನೀಡುವ ಕಾನೂನಿಗೆ ಕಾಂಗ್ರೆಸ್ ಅಡಿಪಾಯ ಹಾಕಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸದುದ್ದೀನ್ ಉವೈಸಿ, ಯುಪಿಎ ಸರಕಾರದ ಅವಧಿಯಲ್ಲಿ ಪಿ ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ತಂದ ತಿದ್ದುಪಡಿಗಳು ಭಯೋತ್ಪಾದನೆಯ ವ್ಯಾಖ್ಯಾನವನ್ನು ವಿಸ್ತರಿಸಿದೆ ಮತ್ತು ಈಗ ವಿಚಾರಣಾಧೀನ ಕೈದಿಗಳನ್ನು ವರ್ಷಗಳ ಕಾಲ ಜೈಲಿನಲ್ಲಿಡಲು ಬಳಸಲಾಗುತ್ತಿರುವ ನಿಬಂಧನೆಗಳನ್ನು ಸೃಷ್ಟಿಸಿವೆ. ಸುಪ್ರೀಂ ಕೋರ್ಟ್ ಇಬ್ಬರು ವಿಚಾರಣಾಧೀನ ಆರೋಪಿಗಳಿಗೆ ಜಾಮೀನು ನೀಡಲಿಲ್ಲ ಮತ್ತು ಜಾಮೀನು ನೀಡದ ಕಾರಣವನ್ನು ಕೂಡ ವಿವರಿಸಿದೆ ಎಂದು ಹೇಳಿದರು.
ಯುಪಿಎ ಸರಕಾರದ ಅವಧಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. “ಅಸ್ಪಷ್ಟವಾಗಿವೆ ಮತ್ತು ದುರುಪಯೋಗಕ್ಕೆ ಕಾರಣವಾಗುತ್ತಿದೆ” ಎಂದು ದಶಕದ ಹಿಂದೆ ಸಂಸತ್ತಿನಲ್ಲಿ ಮಾತನಾಡುವಾಗ ತಿದ್ದುಪಡಿಗಳಿಗೆ ತಾನು ವಿರೋಧಿಸಿರುವುದನ್ನು ಉವೈಸಿ ನೆನಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ ಉವೈಸಿ, ಪಕ್ಷವು ತಾನು ರೂಪಿಸಿದ ಕಾನೂನುಗಳ ಪರಿಣಾಮಗಳನ್ನು ಎಂದಾದರೂ ಅನುಭವಿಸಿದೆಯೇ ಎಂದು ಪ್ರಶ್ನಿಸಿದರು. ಕಾನೂನನ್ನು ಕಾಂಗ್ರೆಸ್ ಮತ್ತು ಗೃಹ ಸಚಿವ ಚಿದಂಬರಂ ಅವರು ರಚಿಸಿದರು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ನ ಯಾವುದೇ ನಾಯಕರು ಒಂದು ವರ್ಷ, ಎರಡು ವರ್ಷ ಅಥವಾ ಐದೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದರು.
ಆರೋಪಪಟ್ಟಿ ಸಲ್ಲಿಸದೆ 180 ದಿನಗಳವರೆಗೆ ಬಂಧನಕ್ಕೆ ಅವಕಾಶ ನೀಡುವ ಯುಎಪಿಎ ಸೆಕ್ಷನ್ 43ಡಿ ಯನ್ನು ಉಲ್ಲೇಖಿಸಿದ ಉವೈಸಿ, ಈ ನಿಬಂಧನೆಯು ಅಲ್ಪಸಂಖ್ಯಾತರ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು.







