ಬಿಹಾರ ವಿಧಾನಸಭಾ ಚುನಾವಣೆ: ನಾಲ್ಕು ಕ್ಷೇತ್ರಗಳಲ್ಲಿ ಆರ್ಜೆಡಿ ಎದುರು ಕಾಂಗ್ರೆಸ್ ಸ್ಪರ್ಧೆ

Photo credit: PTI
ಹೊಸದಿಲ್ಲಿ: ಬಿಹಾರದ ಲಾಲ್ ಗಂಜ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆದಿತ್ಯ ಕುಮಾರ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈ ಕ್ಷೇತ್ರದಿಂದ ಆರ್ಜೆಡಿ ಪಕ್ಷದ ಶಿವಾನಿ ಶುಕ್ಲಾ ಸ್ಪರ್ಧಿಸಿದ್ದು, ಈ ನಾಮಪತ್ರ ಹಿಂದೆಗೆತದಿಂದಾಗಿ, ಕಾಂಗ್ರೆಸ್ ತನ್ನ ಮೈತ್ರಿ ಪಕ್ಷವೇ ಆದ ಆರ್ಜೆಡಿ ಎದುರು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾದಂತಾಗಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬುದನ್ನು ಸೂಚಿಸುವಂತೆ ಮೈತ್ರಿಕೂಟದ ಅಂಗಪಕ್ಷಗಳಾದ ಆರ್ಜೆಡಿ, ಕಾಂಗ್ರೆಸ್, ಸಿಪಿಐ ಹಾಗೂ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಗಳು ಹಲವು ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಯಾಗಿದ್ದವು.
ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಆದಿತ್ಯ ಕುಮಾರ್ ಅವರು ಲಾಲ್ ಗಂಜ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ಹಿಂಪಡೆಯುವವರೆಗೆ ಆರ್ಜೆಡಿ ಮತ್ತು ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಗಳಾಗಿದ್ದವು. ಸೀಟು ಹಂಚಿಕೆ ಕುರಿತು ಆರ್ಜೆಡಿ ಮತ್ತು ಕಾಂಗ್ರೆಸ್ ನಡುವೆ ಇನ್ನೂ ಮಾತುಕತೆಗಳು ಮುಂದುವರಿದ್ದರೂ, ನರ್ತಕಿ ಗಂಜ್, ವೈಶಾಲಿ, ಸುಲ್ತಾನ್ ಗಂಜ್ ಹಾಗೂ ಕಹಲ್ಗಾಂವ್ ವಿಧಾನಸಭಾ ಕ್ಷೇತ್ರಗಳಲ್ಲಿ ಪರಸ್ಪರ ಸೆಣಸುತ್ತಿವೆ.
ಈ ನಡುವೆ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಸ್ಪರ್ಧಿಸಿರುವ ಕುಟುಂಬ ವಿಧಾನಸಭಾ ಕ್ಷೇತ್ರದಿಂದ ಆರ್ಜೆಡಿ ಕೂಡಾ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆ ಮೂಲಕ ಕುಟುಂಬ ವಿಧಾನಸಭಾ ಕ್ಷೇತ್ರದಿಂದ ಆರ್ಜೆಡಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ವದಂತಿಗಳಿಗೆ ಅಂತ್ಯವಾಡಿದೆ.







