ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಈ ಸರಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವವು ಅಪಾಯಕಾರಿ ದಾಳಿ ಎದುರಿಸುತ್ತಿದೆ ಎಂದ ಜೈರಾಮ್ ರಮೇಶ್

ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: “ಕಳೆದ 11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬುಧವಾರ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿದೆ. “ಈ ಸರಕಾರದ ಆಡಳಿತದಲ್ಲಿ ಭಾರತೀಯ ಪ್ರಜಾಪ್ರಭುತ್ವವು ವ್ಯವಸ್ಥಿತ ಹಾಗೂ ಐದು ಪಟ್ಟು ಅಪಾಯಕಾರಿ ದಾಳಿಯನ್ನು ಎದುರಿಸುತ್ತಿದೆ” ಎಂದೂ ಅದು ಆರೋಪಿಸಿದೆ.
ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಅದನ್ನು ಭಾರತೀಯ ಪ್ರಜಾಪ್ರಭುತ್ವ ಇತಿಹಾಸದ ‘ಕರಾಳ ಅಧ್ಯಾಯ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿರುವ ಬೆನ್ನಿಗೇ, ಕಾಂಗ್ರೆಸ್ ಈ ತೀಕ್ಷ್ಣ ವಾಗ್ದಾಳಿ ನಡೆಸಿದೆ. ಆದರೆ, ಹಾಲಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಐದು ವಲಯಗಳು ಎದುರಿಸುತ್ತಿರುವ ಅಪಾಯವನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “2024ರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಸಂವಿಧಾನ ಜಾರಿಗೊಳಿಸಲು ಹಾಗೂ ಡಾ. ಅಂಬೇಡ್ಕರ್ ಅವರ ಪರಂಪರೆಗೆ ದ್ರೋಹವೆಸಗಲು ಪ್ರಧಾನಿ ನರೇಂದ್ರ ಮೋದಿ 400ಕ್ಕೂ ಹೆಚ್ಚು ಸ್ಥಾನಗಳ ಜನಾದೇಶ ಬಯಸಿದ್ದರು” ಎಂದು ಆರೋಪಿಸಿದ್ದಾರೆ.
ಆದರೆ, ಅವರ ಮನವಿಯನ್ನು ತಿರಸ್ಕರಿಸಿದ್ದ ಮತದಾರರು, ಹಾಲಿ ಸಂವಿಧಾನದಡಿ ಅಳವಡಿಸಲಾಗಿರುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯದ ಸಂರಕ್ಷಣೆ ಹಾಗೂ ರಕ್ಷಣೆ ಮಾಡುವ ಹಾಗೂ ಅದನ್ನು ಮತ್ತಷ್ಟು ಉತ್ತೇಜಿಸುವ ಆಯ್ಕೆ ಮಾಡಿಕೊಂಡರು ಎಂದೂ ಅವರು ಹೇಳಿದ್ದಾರೆ.
ಕೇವಲ ಸಾರ್ವಜನಿಕ ವಿಷಯಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಕ್ಕಾಗಿ ಸಂಸದರನ್ನು ಅಮಾನತುಗೊಳಿಸುವ ಮೂಲಕ ಸಂಸತ್ತನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿರುವ ಅವರು, ಪ್ರಮುಖ ಶಾಸನಗಳ ಕುರಿತು ಸೂಕ್ತ ಚರ್ಚೆ ನಡೆಸದೆ ಅವುಗಳನ್ನು ಹತ್ತಿಕ್ಕಲಾಗಿದೆ ಎಂದೂ ದೂರಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಸರಕಾರ ದುರ್ಬಲಗೊಳಿಸಿದೆ ಹಾಗೂ ಕೇಂದ್ರ-ರಾಜ್ಯ ಸರಕಾರಗಳ ನಡುವಿನ ಸಂಬಂಧಗಳನ್ನು ನಾಶಗೊಳಿಸಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಮೋದಿ ಸರಕಾರ ಭಯದ ವಾತಾವರಣ ನಿರ್ಮಾಣ ಮಾಡಿದ್ದು, ಶಾಸನಾತ್ಮಕ ಪ್ರತೀಕಾರ ಕ್ರಮದಿಂದಾಗಿ, ಈ ಹಿಂದೆ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಔದ್ಯಮಿಕ ನಾಯಕರ ಮೇಲೆ ಗಂಭೀರ ಪರಿಣಾಮವುಂಟಾಗಿದೆ ಎಂದು ಈ ಪೋಸ್ಟ್ ನಲ್ಲಿ ಅವರು ಅಪಾದಿಸಿದ್ದಾರೆ.
“ಇದರಿಂದಾಗಿ, ವಿಮಾನ ನಿಲ್ದಾಣಗಳು, ಬಂದರುಗಳು, ಸಿಮೆಂಟ್ ಘಟಕಗಳು ಹಾಗೂ ಮಾಧ್ಯದಮ ಸಂಸ್ಥೆಗಳಂಥ ಪ್ರಮುಖ ಆಸ್ತಿಪಾಸ್ತಿಗಳನ್ನು ಇಂತಹ ಗುಂಪುಗಳಿಗೆ ಹಸ್ತಾಂತರಿಸಲಾಗಿದೆ” ಎಂದು ಅನುಕೂಲ ಪಡೆದ ಉದ್ಯಮ ಸಮೂಹವೊಂದನ್ನು ಉಲ್ಲೇಖಿಸಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಸರಕಾರದ ವಿರುದ್ಧ ವಿಮರ್ಶಾತ್ಮಕವಾಗಿರುವ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಬೆದರಿಕೆ, ಬಂಧನಗಳು ಹಾಗೂ ದಾಳಿಗಳಿಗೆ ಗುರಿಯಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
“ಜಾಹೀರಾತುಗಳನ್ನು ಮಾಧ್ಯಮ ಸುದ್ದಿಗಳನ್ನು ನಿಯಂತ್ರಿಸಲು ಬಳಸುತ್ತಿದ್ದು, ವಿರೋಧ ಪಕ್ಷಗಳನ್ನು ಟ್ರೋಲ್ ಮಾಡಲು ಹಾಗೂ ವಿಭಜನಕಾರಿ ನಿರೂಪಣೆಗಳನ್ನು ಹರಡಲು ಸುದ್ದಿ ಮಾಧ್ಯಮಗಳಿಗೆ ತೆರಿಗೆದಾರರ ಹಣವನ್ನು ವಿನಿಯೋಗಿಸಲಾಗುತ್ತಿದೆ” ಎಂದು ಅವರು ಚಾಟಿ ಬೀಸಿದ್ದಾರೆ. ಒಂದು ಕಾಲದಲ್ಲಿ ಉತ್ತರದಾಯಿತ್ವದ ಸಾಧನವಾಗಿದ್ದ ಮಾಹಿತಿ ಹಕ್ಕು ಕಾಯ್ದೆಯನ್ನು ಇದೀಗ ನಿಷ್ಕ್ರಿಯಗೊಳಿಸಲಾಗಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯಂತಹ ತನಿಖಾ ಸಂಸ್ಥೆಗಳನ್ನು ವಿವಿಧ ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ನೀಡಲು ನಿಯೋಜಿಸಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.
Our statement on the five-fold assault on Indian Democracy that has led to the Undeclared Emergency@11 pic.twitter.com/SZI1FthtEK
— Jairam Ramesh (@Jairam_Ramesh) June 25, 2025







