'ಕಪಟ ವಾದ': ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ ಬಗ್ಗೆ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಟೀಕೆ

ಅಮಿತ್ ಶಾ / ಜೈರಾಮ್ ರಮೇಶ್ (Photo: PTI)
ಹೊಸದಿಲ್ಲಿ: ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಯು ದೇಶದ ಕಡಲ ವ್ಯಾಪಾರವನ್ನು ಹಲವು ಪಟ್ಟು ಹೆಚ್ಚಿಸುತ್ತದೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಮಂಗಳವಾರ ʼಕಪಟ ವಾದʼ ಎಂದು ಟೀಕಿಸಿದೆ.
ಮಾಜಿ ಮಾಜಿ ಪರಿಸರ ಸಚಿವರೂ ಆಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಪ್ರತಿಕ್ರಿಯಿಸಿ, ಈ ಯೋಜನೆಯು ಪರಿಸರಕ್ಕೆ ಮತ್ತು ಸಾಮಾಜಕ್ಕೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದನ್ನು ಗೃಹ ಸಚಿವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.
70ಕ್ಕೂ ಹೆಚ್ಚು ವಿಜ್ಞಾನಿಗಳು, ಪರಿಸರವಾದಿಗಳು ಮತ್ತು ಮಾಜಿ ಅಧಿಕಾರಿಗಳು ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಯನ್ನು ಮರುಪರಿಶೀಲಿಸುವಂತೆ ಸರಕಾರವನ್ನು ಒತ್ತಾಯಿಸಿದ ಒಂದು ದಿನದ ನಂತರ ಈ ಹೇಳಿಕೆ ಹೊರ ಬಿದ್ದಿದೆ.
ಈ ಯೋಜನೆಯ ವಿವಿಧ ಅಂಶಗಳನ್ನು ಮಾಧ್ಯಮಗಳು ಹಲವು ಬಾರಿ ಹೊರ ತಂದಿವೆ. ಆದರೆ ಇದ್ಯಾವುದನ್ನೂ ಮೋದಿ ಸರಕಾರ ಗಮನಿಸುತ್ತಿಲ್ಲ. ಈಗಾಗಲೇ 70 ವಿದ್ವಾಂಸರು, ಪರಿಸರವಾದಿಗಳು, ಅರಣ್ಯಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದು, ಯೋಜನೆಯ ಗಂಭೀರ ಮತ್ತು ಬದಲಾಯಿಸಲಾಗದ ಋಣಾತ್ಮಕ ಪರಿಣಾಮಗಳ ಬಗ್ಗೆ ತಮ್ಮ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.







