ಗುತ್ತಿಗೆ ಕರಾರು ಉಲ್ಲಂಘನೆ ಆರೋಪಿಸಿದ ಅರ್ಜೆಂಟೀನಾ ಫುಟ್ ಬಾಲ್ ಅಸೋಸಿಯೇಷನ್; ಸ್ಪಷ್ಟನೆ ನೀಡುವಂತೆ ಕೇರಳ ಸರಕಾರವನ್ನು ಆಗ್ರಹಿಸಿದ ಕಾಂಗ್ರೆಸ್

ಪಿಣರಾಯಿ ವಿಜಯನ್ | PTI
ತಿರುವನಂತಪುರಂ: ಕೇರಳ ರಾಜ್ಯ ಸರಕಾರವು ಗುತ್ತಿಗೆ ಕರಾರನ್ನು ಉಲ್ಲಂಘಿಸಿದ್ದರಿಂದಾಗಿ, ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡದ ಉದ್ದೇಶಿತ ಕೇರಳ ಭೇಟಿ ರದ್ದಾಯಿತು ಎಂದು ಅರ್ಜೆಂಟೀನಾ ಫುಟ್ ಬಾಲ್ ಅಸೋಸಿಯೇಷನ್ ಮಾಡಿರುವ ಆರೋಪದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಶನಿವಾರ ಕೇರಳ ಸರಕಾರವನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಮುಖ್ಯಸ್ಥ ಸನ್ನಿ ಜೋಸೆಫ್ ಹಾಗೂ ಕಾಂಗ್ರೆಸ್ ಲೋಕಸಭಾ ಸಂಸದ ಶಫಿ ಪರಾಂಬಿಲ್, ‘ಲಿಯೋನೆಲ್ ಮೆಸ್ಸಿ ನಾಪತ್ತೆಯಾಗಿದ್ದಾರೆ” ಎಂದು ರಾಜ್ಯ ಸರಕಾರವನ್ನು ವ್ಯಂಗ್ಯವಾಡಿದರಲ್ಲದೆ, ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
“ಈ ವಿಷಯದಲ್ಲಿ ರಾಜ್ಯ ಸರಕಾರ ಆರೋಪಿಯಾಗಿರುವುದರಿಂದ, ರಾಜ್ಯ ಸರಕಾರವೇ ಈ ಕುರಿತು ಪ್ರತಿಕ್ರಿಯೆ ನೀಡಬೇಕು. ಈಗಾಗಲೇ ಲಕ್ಷಾಂತರ ರೂಪಾಯಿಯನ್ನು ವ್ಯಯಿಸಲಾಗಿದೆ. ಇದೀಗ ಅರ್ಜೆಂಟೀನಾ ಫುಟ್ ಬಾಲ್ ಅಸೋಷಿಯೇಷನ್ ಈ ವಿಷಯವನ್ನು ಸ್ಪಷ್ಟಗೊಳಿಸಿದೆ. ರಾಜ್ಯದ ಜನರು ವಾಸ್ತವಾಂಶ ಏನೆಂದು ಅರಿಯಬೇಕಿದೆ” ಎಂದು ಅವರು ಒತ್ತಾಯಿಸಿದರು.
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಫಿ ಪರಾಂಬಿಲ್, “ಸಿಪಿಐ(ಎಂ) ನೇತೃತ್ವದ ಸರಕಾರ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಅಭಿಮಾನಿಗಳ ಪ್ರೀತಿಯನ್ನು ದುರುಪಯೋಗಪಡಿಸಿಕೊಂಡಿದೆ” ಎಂದು ಆಪಾದಿಸಿದರು.
“ರಾಜ್ಯ ಸರಕಾರದ ಈ ಪ್ರಯತ್ನ ಅರ್ಜೆಂಟೀನಾ ತಂಡವನ್ನು ರಾಜ್ಯಕ್ಕೆ ಕರೆತಂದ ಶ್ರೇಯವನ್ನು ಪಡೆಯುವುದಾಗಿತ್ತು. ಅವರು ಜನರನ್ನು ವಂಚಿಸಿದ್ದಾರೆ. ಇದೀಗ ರಾಜ್ಯ ಸರಕಾರ ಗುತ್ತಿಗೆ ಕರಾರನ್ನು ಉಲ್ಲಂಘಿಸಿದೆ ಎಂದು ಅರ್ಜೆಂಟೀನಾ ಫುಟ್ ಬಾಲ್ ಅಸೋಷಿಯೇಷನ್ ಸ್ಪಷ್ಟಪಡಿಸಿದೆ” ಎಂದು ಅವರು ದೂರಿದರು.
ಇದಕ್ಕೂ ಮುನ್ನ, ಅರ್ಜೆಂಟೀನಾ ತಂಡವು ಕೇರಳ ರಾಜ್ಯಕ್ಕೆ ಭೇಟಿ ನೀಡಲಿದೆ ಹಾಗೂ ಅವರಿಗೆ ಈಗಾಗಲೇ ಪಂದ್ಯದ ಶುಲ್ಕವನ್ನು ಪ್ರಾಯೋಜಕರು ಪಾವತಿಸಿದ್ದಾರೆ ಎಂದು ರಾಜ್ಯ ಕ್ರೀಡಾ ಸಚಿವ ವಿ.ಅಬ್ದುರ್ ರಹಿಮಾನ್ ಹೇಳಿದ್ದರು. ಆದರೆ, ಮೆಸ್ಸಿ ನೇತೃತ್ವದ ತಂಡ ಕೇರಳಕ್ಕೆ ಭೇಟಿ ನೀಡುವುದಿಲ್ಲ ಈ ವಾರದ ಆರಂಭದಲ್ಲಿ ಅವರೇ ಪ್ರಕಟಿಸಿದ್ದರು. ಇದು ಕೇರಳ ರಾಜಕೀಯದಲ್ಲಿ ಪರಸ್ಪರ ವಾಗ್ಯುದ್ಧಕ್ಕೆ ಕಾರಣವಾಗಿದೆ.







