ಕ್ಷೇತ್ರ ಪುನರ್ ವಿಂಗಡಣೆ ಹಿನ್ನೆಲೆ; ಅಸಮಾಧಾನಗೊಂಡು ರಾಜೀನಾಮೆ ನೀಡಿದ ಬಿಜೆಪಿ ಮುಖಂಡ

ಗುವಾಹತಿ: ನಾಗಾಂವ್ ಲೋಕಸಭಾ ಕ್ಷೇತ್ರದ ಪುನರ್ ವಿಂಗಡಣೆಯನ್ನು ವಿರೋಧಿಸಿ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ರಾಜೇನ್ ಗೊಹೇನ್, ಅಸ್ಸಾಂ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಬರೆದ ಪತ್ರದಲ್ಲಿ, ಈ ಕ್ಷೇತ್ರದಿಂದ ಪಕ್ಷ ಗೆಲ್ಲುವುದು ಅಸಾಧ್ಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಮುಖ್ಯಮಂತ್ರಿ ಜತೆ ನಡೆಸಿದ ಚರ್ಚೆ ಯಾವುದೇ ಧನಾತ್ಮಕ ಫಲಿತಾಂಶ ನೀಡಿಲ್ಲ ಎಂದು ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ ಗೊಹೇನ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಘಟಕದಲ್ಲಿ ಯಾರಿಗೂ ಸಂಪೂರ್ಣ ಅಧಿಕಾರ ನೀಡಬಾರದು ಎಂದು ಗೊಹೇನ್ ಸುದ್ದಿಗಾರರ ಬಳಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆಸಿದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯಿಂದಾಗಿ ನಾಗಾಂವ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿ ಭವಿಷ್ಯದಲ್ಲಿ ಎಂದೂ ಗೆಲ್ಲಲು ಸಾಧ್ಯವಿಲ್ಲ.ಜನಸಂಖ್ಯೆಯ ಬದಲಾವಣೆಯಿಂದಾಗಿ ಈ ಕ್ಷೇತ್ರಕ್ಕೆ ಅಪಾಯ ಕಾದಿದೆ" ಎಂದು ಅವರು ಹೇಳಿದರು.
ನಿಮ್ಮೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿದ ಬಳಿಕವೂ ನಾಗಾಂವ್ ಲೋಕಸಭಾ ಕ್ಷೇತ್ರವನ್ನು ಪುನರ್ ವಿಂಗಡಿಸಿದ ರೀತಿಯ ಅಸಮಾಧಾನ ಇದೆ ಎಂದು ಶರ್ಮಾ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.







