ರೈಲಿನಲ್ಲಿ ಪೂರೈಸಲಾಗಿದ್ದ ಬಿರಿಯಾನಿಯಲ್ಲಿ ಸತ್ತು ಬಿದ್ದಿದ್ದ ಹುಳು, ಪ್ರಯಾಣಿಕ ಅಸ್ವಸ್ಥ: 25 ಸಾವಿರ ರೂ. ಪರಿಹಾರ ನೀಡುವಂತೆ ಗ್ರಾಹಕರ ನ್ಯಾಯಾಲಯ ಆದೇಶ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ರೈಲು ಪ್ರಯಾಣಿಕರೊಬ್ಬರು ಹುಳು ಬಿದ್ದ ಬಿರಿಯಾನಿ ಸೇವಿಸಿ, ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಪ್ರಯಾಣಿಕರಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ದಿಲ್ಲಿಯ ಗ್ರಾಹಕರ ನ್ಯಾಯಾಲಯವೊಂದು IRCTCಗೆ ಆದೇಶಿಸಿದೆ.
ಈ ಸಂಬಂಧ, ಅಕ್ಟೋಬರ್ 28ರಂದು ಆದೇಶ ಹೊರಡಿಸಿರುವ ಜಿಲ್ಲಾ ಗ್ರಾಹಕರ ಕುಂದುಕೊರತೆ ಆಯೋಗದ ಅಧ್ಯಕ್ಷೆ ಮೋನಿಕಾ ಶ್ರೀವಾಸ್ತವ, IRCTC ತನ್ನ ಸೇವೆಯಲ್ಲಿನ ನ್ಯೂನತೆಗಾಗಿ ದೋಷಿಯಾಗಿದೆ ಎಂದು ತೀರ್ಪು ನೀಡಿದ್ದಾರೆ.
ಈ ಘಟನೆಗಾಗಿ IRCTC ಕ್ಷಮೆ ಕೋರಿ, ಸೇವಾ ಪೂರೈಕೆದಾರರಿಗೆ ದಂಡ ವಿಧಿಸಿದ್ದರೂ, ದೂರುದಾರ ಪ್ರಯಾಣಿಕ ಕಿರಣ್ ಕೌಶಲ್ ಎದುರಿಸಿರುವ ದೈಹಿಕ ಮತ್ತು ಮಾನಸಿಕ ಯಾತನೆಗೆ ಇದು ಸಮವಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ.
ಡಿಸೆಂಬರ್ 28, 2018ರಂದು ಪೂರ್ವ ಎಕ್ಸ್ ಪ್ರೆಸ್ ರೈಲಿನಲ್ಲಿ ಹೊಸ ದಿಲ್ಲಿಯಿಂದ ಜಾರ್ಖಂಡ್ ನ ಜಸಿದಿಹ್ ಗೆ ಪ್ರಯಾಣಿಸುತ್ತಿದ್ದ ಕಿರಣ್ ಕೌಶಲ್, 80 ರೂ. ಬೆಲೆಯ ವೆಜಿಟಬಲ್ ಬಿರಿಯಾನಿಗೆ ಆದೇಶಿಸಿದ್ದರು.
ಆದರೆ, ವೆಜಿಟಬಲ್ ಬಿರಿಯಾನಿಯನ್ನು ಸೇವಿಸುವಾಗ, ಅದರಲ್ಲಿ ಅವರ ಕಣ್ಣಿಗೆ ಉದ್ದನೆಯ ಹಾಗೂ ಸತ್ತು ಬಿದ್ದ ಹುಳುವೊಂದು ಬಿದ್ದಿತ್ತು. ಕಲುಷಿತ ಆಹಾರ ಸೇವಿಸುತ್ತಿದ್ದಂತೆಯೆ ಅವರ ಆರೋಗ್ಯ ಕ್ಷೀಣಿಸಿ, ವಾಂತಿ ಹಾಗೂ ಹೊಟ್ಟೆ ನೋವಿಗೆ ತುತ್ತಾಗಿದ್ದರು.
ರೈಲಿನಲ್ಲಿ ಏಕಾಂಗಿಯಾಗಿದ್ದ ಕಿರಣ್ ಕೌಶಲ್ ಗೆ ತಕ್ಷಣವೇ ಯಾವುದೇ ವೈದ್ಯಕೀಯ ನೆರವು ದೊರೆಯದೆ ಹೋಗಿದ್ದರಿಂದ, ಇಡೀ ಪ್ರಯಾಣದಲ್ಲಿ ಅವರು ತೊಂದರೆಗೀಡಾಗಿದ್ದರು. ಬಳಿಕ ದೂರು ನೋಂದಣಿ ಪುಸ್ತಕವನ್ನು ನೀಡುವಂತೆ ಅವರು ರೈಲ್ವೆ ಸಿಬ್ಬಂದಿಗಳ ಬಳಿ ಬೇಡಿಕೆ ಇಟ್ಟಾಗ, ಆರಂಭದಲ್ಲಿ ಅದನ್ನು ಒದಗಿಸಲು ರೈಲ್ವೆ ಸಿಬ್ಬಂದಿಗಳು ನಿರಾಕರಿಸಿದ್ದರು. ಕೊನೆಗೆ ದೂರು ದಾಖಲಿಸುವಲ್ಲಿ ಯಶಸ್ವಿಯಾದರೂ, ಸೇವಾ ಪೂರೈಕೆದಾರನು ದೂರು ವಾಪಸು ಪಡೆಯುವಂತೆ ಅವರ ಮೇಲೆ ಒತ್ತಡ ಹೇರಿದ್ದರಿಂದ, ಅವರು ಮಾನಸಿಕವಾಗಿ ಮತ್ತಷ್ಟು ಕುಗ್ಗಿ ಹೋಗಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಅನುಭವಿಸಿರುವ ಮಾನಸಿಕ ಹಿಂಸೆ ಹಾಗೂ ಕಿರುಕುಳಕ್ಕೆ ಪ್ರತಿಯಾಗಿ ತನಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಿರಣ್ ಕೌಶಲ್ ಬೇಡಿಕೆ ಇರಿಸಿದ್ದರು.
ಈ ಪ್ರಕರಣ ಹಾಗೂ ಕಿರಣ್ ಕೌಶಲ್ ಒದಗಿಸಿದ್ದ ವಿಡಿಯೊ ಚಿತ್ರೀಕರಣದ ಸಾಕ್ಷ್ಯವನ್ನು ಪರಿಗಣಿಸಿದ ಗ್ರಾಹಕರ ನ್ಯಾಯಾಲಯ, ಅಂತಿಮವಾಗಿ ಅವರಿಗೆ 25,000 ರೂ. ಪರಿಹಾರ ಘೋಷಿಸಿದೆ.
ಸೌಜನ್ಯ: barandbench.com







